ಮಡಿಕೇರಿ, ಮೇ 9: ಗಾಳಿಬೀಡಿನ ಬಸ್ ತಂಗುದಾಣ ಒಂದರಲ್ಲಿ ವಿದೇಶಿ ಯುವಕನನ್ನು ಕಂಡು ಗ್ರಾಮಸ್ಥರು ಆತಂಕಗೊಂಡ ಸನ್ನಿವೇಶ, ಇಂದು ಬೆಳಿಗ್ಗೆ ಉಂಟಾಯಿತು. ಗಾಳಿಬೀಡಿನ ಪರಿಶಿಷ್ಟ ಪಂಗಡ ಕಾಲನಿಯ ಬಳಿ ಇರುವ ಬಸ್ ತಂಗುದಾಣದಲ್ಲಿ ಕುಳಿತಿದ್ದ ವಿದೇಶಿ ಯುವಕನನ್ನು ಕಂಡ ಅಲ್ಲಿನ ಗ್ರಾಮಸ್ಥರು ಎಚ್ಚೆತ್ತುಕೊಂಡು ಗಾಳಿಬೀಡು ಪಿಡಿಓ ಶಶಿ ಕಿರಣ್ ಅವರಿಗೆ ತಿಳಿಸಿದ್ದಾರೆ.
ನಂತರ ಶಶಿಕಿರಣ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತಲುಪುವವರೆಗೆ, ಯುವಕನು ವಣಚಲ್ ಕಡೆಗೆ ನಡೆಯಲಾರಂಭಿಸಿದ್ದಾನೆ. ಕೊರೊನಾ ಭಯದಿಂದಾಗಿ ಯುವಕನನ್ನು ತಡೆಯುವ ಕಾರ್ಯಕ್ಕೆ ಗ್ರಾಮಸ್ಥರು ಎದುರಾಗಲಿಲ್ಲ. ಆತನು ಬ್ರೆಜಿಲಿನವನು. ಒಂದು ವರ್ಷದಿಂದ ಜಿಲ್ಲೆಯಲ್ಲೇ ಇರುವುದಾಗಿ ಗ್ರಾಮಸ್ಥರಲ್ಲಿ ತಿಳಿಸಿದ್ದಾನೆ. ಪೊಲೀಸ್ ಸಿಬ್ಬಂದಿ ವಣಚಲ್‍ಗೆ ಧಾವಿಸಿ ಈತನನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರೆಂಟೈನ್ ಕೊಠಡಿಯಲ್ಲಿ ಇರಿಸಿದ್ದಾರೆ. ಭಾಷೆಯ ಕಷ್ಟದಿಂದಾಗಿ ಬೇರೆ ಯಾವ ಮಾಹಿತಿಯೂ ಲಭ್ಯವಿಲ್ಲ. ಸುಮಾರು 24 ವರ್ಷದ ಬ್ರೆಜಿಲಿನ ಯುವಕನಾಗಿದ್ದು, ಒಂದು ವರ್ಷದಿಂದ ಜಿಲ್ಲೆಯಲ್ಲಿಯೇ ಇದ್ದಾನೆ ಎಂಬ ಮಾಹಿತಿ ಮಾತ್ರ ಲಭ್ಯವಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.