ಮಡಿಕೇರಿ ಮೇ 7 : ಕೋವಿಡ್-19 ರ ಸಂಬಂಧ ಲಾಕ್‍ಡೌನ್‍ನಿಂದ ಜವಾಹರ್ ನವೋದಯ ವಿದ್ಯಾಲಯದ 21 ವಿದ್ಯಾರ್ಥಿಗಳು ಮಧ್ಯಪ್ರದೇಶದ ಇಂದೋರ್‍ನ ನವೋದಯ ವಿದ್ಯಾಲಯದಲ್ಲಿದ್ದರು. ಮಧ್ಯ ಪ್ರದೇಶದ ಇಂದೋರ್ ನವೋದಯ ವಿದ್ಯಾಲಯದ 24 ವಿದ್ಯಾರ್ಥಿಗಳು ನಗರದ ಹೊರವಲಯದಲ್ಲಿರುವ ನವೋದಯ ವಿದ್ಯಾಲಯದಲ್ಲಿದ್ದರು.

ಈ ಬಗ್ಗೆ ನವೋದಯ ಪ್ರಾಂಶುಪಾಲರು ಜಿಲ್ಲಾಡಳಿತದ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಅವರು ನಿಯಮಾನುಸಾರ ಬಸ್ ವ್ಯವಸ್ಥೆಯನ್ನು ಕಲ್ಪಿಸಿ, ಇಬ್ಬರು ಶಿಕ್ಷಕರ ಬೆಂಗಾವಲಿನಲ್ಲಿ ಈ ಜಿಲ್ಲೆಯಲ್ಲಿ ಸಿಲುಕಿದ್ದ 24 ವಿದ್ಯಾರ್ಥಿಗಳನ್ನು ಕೊಲ್ಲಾಪುರದ ವರೆಗೆ ಬಿಟ್ಟು, ಇಂದೋರ್‍ನಿಂದ ಕೊಲ್ಲಾಪುರ ದವರೆಗೆ ಅಲ್ಲಿನ ಶಾಲೆಯ ಶಿಕ್ಷಕರ ಬೆಂಗಾವಲಿನಲ್ಲಿ ಬಸ್‍ನಲ್ಲಿ ಬರುವ ಜಿಲ್ಲೆಯ ವಿದ್ಯಾರ್ಥಿಗಳನ್ನು ಕರೆ ತರಲು ಅನುಮತಿ ನೀಡಿದರು.

ಎರಡೂ ಕಡೆಯಿಂದ ಮೇ 5 ರಂದು ಮಧ್ಯಾಹ್ನ 2.30 ಗಂಟೆಗೆ ವಿದ್ಯಾರ್ಥಿಗಳನ್ನು ಕರೆತಂದ ಬಸ್ ಹೊರಟಿದ್ದು, ಮೇ 7 ರಂದು ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ತಲುಪಿದ್ದಾರೆ. ನಂತರ ಪ್ರಾಂಶುಪಾಲರ ನೇತೃತ್ವದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.