ಸೋಮವಾರಪೇಟೆ, ಮೇ 7: ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾನಗಲ್ಲು ಶೆಟ್ಟಳ್ಳಿ ಗ್ರಾಮ ನಿವಾಸಿ ಸುರೇಶ್ ಎಂಬವರ ಮೇಲೆ ಅಪರಿಚಿತ ವ್ಯಕ್ತಿಗಳು ನಿನ್ನೆ ರಾತ್ರಿ ಹಲ್ಲೆ ನಡೆಸಿದ್ದು, ಹೊಟ್ಟೆ ಹಾಗೂ ತಲೆಯ ಭಾಗಕ್ಕೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಇಂದು ಬೆಳಿಗ್ಗೆ ಹಾನಗಲ್ಲು ಬಾಣೆಯ ತೋಟದ ಬದಿಯಲ್ಲಿ ನರಳಾಡುತ್ತಾ ಬಿದ್ದಿದ್ದ ಸುರೇಶ್ ಅವರನ್ನು ಸ್ಥಳೀಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಸುರೇಶ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣಾಧಿಕಾರಿ ಶಿವಶಂಕರ್ ಅವರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.