ಮಡಿಕೇರಿ, ಮೇ 7 : 2013 ರ ಮಾರ್ಚ್ 30 ರಂದು ಸಹಕಾರ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿ, ಈ ಹಿಂದೆ ರೂ, 3 ಲಕ್ಷಗಳವರೆಗೆ ಸಾಲ ಪಡೆದ ಬಡ್ಡಿ ರಹಿತ ಸಾಲಕ್ಕೆ ಕೆಲವು ಷರತ್ತುಗಳೋಂದಿಗೆ ಶೇ. 7 ರಂತೆ ಬಡ್ಡಿ ವಿಧಿಸಲು ತೀರ್ಮಾನಿಸಿದೆ.

ಜೊತೆಗೆ ಸಾಲ ಪಡೆಯುವವರ ಆಧಾರ್ ಕಾರ್ಡ್‍ನ ವಿಳಾಸವು ಕೂಡ ಪ್ರಾಥಮಿಕ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಇರಬೇಕು ಮತ್ತು ಬಿಡುಗಡೆ ಮಾಡಿದ ಸಾಲವನ್ನು ಸಹಕಾರ ಬ್ಯಾಂಕಿನಲ್ಲಿ ತೆರೆಯಲ್ಪಟ್ಟ ಕೆ.ಸಿ.ಸಿ ಉಳುವಾರು (ರುಪೇ ಕಾರ್ಡ್) ಖಾತೆಗೆ ನೇರವಾಗಿ ನೀಡುವಂತೆ ಸೂಚಿಸಲಾಗಿದೆ.

ಇದರಿಂದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮುಖಾಂತರ ಎಲ್ಲಾ ರೈತರು ವ್ಯವಹಾರವನ್ನು ಮಾಡಬೇಕಿದೆ. ಕೊಡಗು ಜಿಲ್ಲೆಯಲ್ಲಿ ಹಲವಾರು ಪ್ರಾಥಮಿಕ ಸಹಕಾರ ಸಂಘಗಳು ತಮ್ಮದೇ ಆದ ಸ್ವಂತ ನಿಧಿಯಲ್ಲಿ ü(ಫಂಡ್) ರೈತರಿಗೆ ಸಾಲ ಮತ್ತು ಕೀಟನಾಶಕ ಗೊಬ್ಬರವನ್ನು ಸಹ ವಿತರಣೆ ಮಾಡುತ್ತಿವೆ.

ಈ ರುಪೇ ಕಾರ್ಡ್ ಯೋಜನೆಯನ್ನು ಅಳವಡಿಸಿದರೆ, ಪ್ರಾಥಮಿಕ ಸಹಕಾರ ಸಂಘದಲ್ಲಿ ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರಿಗೆ ಅನಾನುಕೂಲ ಆಗುತ್ತದೆ. ಆದ್ದರಿಂದ ಎಲ್ಲಾ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಈ ಹಿಂದೆ ಇರುವಂತೆ ರುಪೇ ಕಾರ್ಡ್ ಬದಲಿಗೆ ಸಹಕಾರ ಸಂಘಗಳೇ ನೇರವಾಗಿ ಸದಸ್ಯರ ಚಾಲ್ತಿಯಲ್ಲಿರುವ ಉಳಿತಾಯ ಖಾತೆಗಳ ಮುಖಾಂತರವೇ ವ್ಯವಹಾರವನ್ನು ನಡೆಸಲು ಅವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ.