ವೀರಾಜಪೇಟೆ, ಮೇ 7: ಕೊರೊನಾ ವೈರಸ್ ಭೀತಿಯ ಲಾಕ್‍ಡೌನ್ ನಿರ್ಬಂಧದ ಸಡಿಲಿಕೆಯ ಸಮಯ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ವಿಸ್ತರಣೆಯಾದರೂ ಇಂದು ಜನ ವಾಹನ ದಟ್ಟಣೆ ವಿರಳವಾಗಿತ್ತು. ನಿರ್ಬಂಧದ ಅವಧಿಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ದಿನಸಿ ಹಾಗೂ ಇತರ ಅಂಗಡಿಗಳಲ್ಲಿ ಖರೀದಿಗೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಚರಿಸುತ್ತಿದ್ದವರಿಗೆ ಸಂಚಾರಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು.
ಅಪರಾಹ್ನದ ನಂತರ ಮೋಡ ಕವಿದ ವಾತಾವರಣವಿದ್ದು, 3ಗಂಟೆಯ ಸಮಯದಲ್ಲಿ ತುಂತುರು ಮಳೆ ಸುರಿಯಿತು. ಆಟೋ ರಿಕ್ಷಾಗಳು ಎಂದಿನಂತೆ ಸಂಚರಿಸಿದವು. ಖಾಸಗಿ ಬಸ್ಸುಗಳು ಸಂಚರಿಸಲಿಲ್ಲ. ಸಮುಚ್ಚಯ ನ್ಯಾಯಾಲಯಗಳ ಕಚೇರಿಯಲ್ಲಿ ಸಿಬ್ಬಂದಿಗಳು ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸಿದರು.
ಹೊರ ಜಿಲ್ಲೆಯ ಕಾರ್ಮಿಕರು ತವರಿಗೆ
ಉತ್ತರ ಕರ್ನಾಟಕದ ಹಾವೇರಿ, ಗದಗ್, ವಿಜಾಪುರ ವಿವಿಧೆಡೆಗಳಿಂದ ಕೆಲಸಕ್ಕಾಗಿ ದಕ್ಷಿಣ ಕೊಡಗಿಗೆ ಬಂದಿದ್ದ ಕಾರ್ಮಿಕರುಗಳನ್ನು ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ತವರಿಗೆ ಕಳುಹಿಸಲಾಯಿತು. ನಿನ್ನೆಯಿಂದಲೇ ಕಾರ್ಮಿಕರುಗಳನ್ನು ಕಳುಹಿಸುವ ಪ್ರಕ್ರಿಯೆ ಆರಂಭಗೊಂಡಿದ್ದು ಇಂದು ಅಂತಿಮ ಗೊಂಡಿದೆ. ಮಡಿಕೇರಿ ಸಾರಿಗೆ ಸಂಸ್ಥೆ ಡಿಪೋವಿನಿಂದ ಸುಮಾರು 17 ಬಸ್ಸುಗಳನ್ನು ವೀರಾಜಪೇಟೆಗೆ ತರಿಸಿ ಈ ಪೈಕಿ 12 ಬಸ್ಸುಗಳು ಹಾವೇರಿ ಕಡೆಗೆ, ಮೈಸೂರು ಕಡೆಗೆ 3 ಬಸ್ಸುಗಳು, ಕೆ.ಆರ್.ನಗರ ಕಡೆಗೆ 2 ಬಸ್ಸುಗಳನ್ನು ಸರಕಾರದ ವೆಚ್ಚದಲ್ಲಿ ಕಳುಹಿಸಲಾಯಿತು. ಇದರಿಂದಾಗಿ ದಕ್ಷಿಣ ಕೊಡಗಿನಲ್ಲಿ ಕೊರೊನಾ ವೈರಸ್‍ನ ನಿರ್ಬಂಧದಿಂದ ಸಿಲುಕಿದ್ದ ಹೊರ ಜಿಲ್ಲೆಯ ಎಲ್ಲ ಕಾರ್ಮಿಕರು ತವರಿಗೆ ಸೇರಿದಂತಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಂ.ಎಲ್. ನಂದೀಶ್ ತಿಳಿಸಿದರು.
ನಗರ ಪೊಲೀಸರ ಅಪರಾಧ ವಿಭಾಗದ ತಂಡ ನಿನ್ನೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ 27 ಹಾಗೂ ಮಾಸ್ಕ್ ಧರಿಸದ 56 ಮಂದಿಗೆ ತಲಾ ರೂ. 100ರಂತೆ ದಂಡ ವಿಧಿಸಿದೆ. ನಿನ್ನೆ ರಾತ್ರಿ ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದಲ್ಲಿ ಕೇರಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಇಬ್ಬರನ್ನು ನಗರ ಪೊಲೀಸರು ಪತ್ತೆಹಚ್ಚಿ ತಾಲೂಕು ತಹಶೀಲ್ದಾರ್ ಮೂಲಕ ಇಲ್ಲಿನ ಬಿ.ಸಿ.ಎಂ. ಹಾಸ್ಟೇಲ್‍ನಲ್ಲಿರಿಸಿದ್ದರಿಂದ ಕ್ವಾರಂಟೇನ್‍ನ ಸಂಖ್ಯೆ 19ಕ್ಕೆ ಏರಿದೆ.