ವಿಶಾಖಪಟ್ಟಣ, ಮೇ 7: ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗೋಪಾಲ ಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ಆರ್ ವೆಂಕಟಪುರಂನಲ್ಲಿರುವ ಎಲ್ಜಿ ಪಾಲಿಮರ್ಸ್ ಕಂಪೆನಿಯಲ್ಲಿಂದು ವಿಷಾನಿಲ ಸೋರಿಕೆಯಾಗಿ 11 ಮಂದಿ ಮೃತರಾಗಿದ್ದು, ಸಾವಿರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ರಾತ್ರಿ 2.30 ಗಂಟೆ ವೇಳೆಗೆ ವಿಷಾನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು, ಗಾಳಿಯ ಮೂಲಕ ಸುತ್ತಮುತ್ತಲ ಪ್ರದೇಶಗಳಿಗೆ ಹರಡಿದೆ. ಪರಿಣಾಮ ವಿಷಾನಿಲವನ್ನು ಉಸಿರಾಡಿದ ಮಂದಿ ಅಸ್ವಸ್ಥರಾಗಿದ್ದಾರೆ. ಕಂಪೆನಿಯ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ವಿಷಾನಿಲ ಪಸರಿಸಿದ್ದು, ಆತಂಕ ಸೃಷ್ಟಿಸಿದೆ. ಸುತ್ತಮುತ್ತಲ ನಿವಾಸಿಗಳಿಗೆ ಉಸಿರಾಟದ ತೊಂದರೆ, ಗಂಟಲು ಕೆರೆತ, ಕಣ್ಣಿನ ಉರಿ, ಹೊಟ್ಟೆನೋವು ಇತ್ಯಾದಿ ಕಾಣಿಸಿಕೊಂಡಿದೆ. ವಿಷಾನಿಲದ ಪರಿಣಾಮದಿಂದ ಜನತೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗುತ್ತಿದ್ದು, ಅವರನ್ನು ಆ್ಯಂಬುಲೆನ್ಸ್, ಸಾರಿಗೆ ಬಸ್ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಒಂದೆಡೆ ಜನತೆ ಎಲ್ಲೆಂದರಲ್ಲಿ ಕುಸಿದು ಬೀಳುತಿದ್ದರೆ, ಮತ್ತೊಂದೆಡೆ ಮೂಕ ಪ್ರಾಣಿ ಪಕ್ಷಿಗಳು ವಿಷಾನಿಲದಿಂದ ನರಳಿ ಸಾಯುತ್ತಿವೆ. ‘ಸ್ಟೆರಿನ್ಗ್ಯಾಸ್’ ಎಂಬ ವಿಷಾನಿಲ ಸೋರಿಕೆಯಾದ್ದರಿಂದ ಅನಾಹುತ ಸಂಭವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹಲವು ಗಂಟೆಗಳ ಅಗತ್ಯವಿದೆ ಎಂದು ಹೇಳಲಾಗಿದೆ.ಆಂಧ್ರ ಪ್ರದೇಶ ಸರಕಾರ ಈಗಾಗಲೇ ಘಟನೆಯಲ್ಲಿ ಸತ್ತವರ ಹಾಗೂ ನೊಂದವರ ಕುಟುಂಬಗಳ ನೆರವಿಗೆ ಶ್ರಮಿಸುತ್ತಿದೆ. ಆಸ್ಪತ್ರೆಗಳಲ್ಲಿ ಅಸ್ವಸ್ಥರಾಗಿ ದಾಖಲಾಗಿರುವವರ ಪರಿಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯಕ್ಕೆ ಮುಂದಾದ ಪೊಲೀಸರೂ ಕೂಡ ಅಸ್ವಸ್ಥರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಮೃತರ ಕುಟುಂಬಕ್ಕೆ 1 ಕೋಟಿ
ವಿಷಾನಿಲ ಸೋರಿಕೆಯಿಂದ ಸತ್ತವರ ಕುಟುಂಬಕ್ಕೆ
(ಮೊದಲ ಪುಟದಿಂದ) ಸರಕಾರದಿಂದ ತಲಾ ಒಂದು ಕೋಟಿ ಪರಿಹಾರ ನೀಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಘೋಷಿಸಿದ್ದಾರೆ. ತೀವ್ರ ಅಸ್ವಸ್ಥರಾದವರಿಗೆ 10 ಲಕ್ಷ, ಆಸ್ಪತ್ರೆಯಲ್ಲಿ 2-3 ದಿನ ದಾಖಲಾಗುವವರಿಗೆ 5 ಲಕ್ಷ ಪರಿಹಾರ ಒದಗಿಸುವುದಾಗಿ ಅವರು ಹೇಳಿದ್ದಾರೆ. ಇದರೊಂದಿಗೆ ಗಾಯಾಳುಗಳಿಗೆ ತಲಾ 1 ಲಕ್ಷ ಹಾಗೂ ಪ್ರಾಥಮಿಕ ಚಿಕಿತ್ಸೆಗೆ 25 ಸಾವಿರ ನೆರವು ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ದುರಂತಕ್ಕೆ ಕಾರಣವಾದ ಕಂಪೆನಿಯಿಂದಲೂ ಪರಿಹಾರ ಕೊಡಿಸುವುದಲ್ಲದೆ ಅವಶ್ಯಕತೆ ಉಳ್ಳವರಿಗೆ ಅದೇ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಜಗನ್ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ. ಅಲ್ಲದೆ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಈ ಮಧ್ಯೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಈ ದುರ್ಘಟನೆ ಸಂಬಂಧ ಸ್ಪಷ್ಟನೆ ಕೋರಿ ಆಂದ್ರ ಹಾಗೂ ಕೇಂದ್ರ ಸರಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.
ಮೋದಿ ಮಾತುಕತೆ
ವಿಷಾನಿಲ ಸೋರಿಕೆ ಪ್ರಕರಣದ ಕುರಿತು ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ವಿಶಾಖಪಟ್ಟಣ ದುರಂತ ಸಂಬಂಧ ಆಂಧ್ರ ಸರಕಾರಕ್ಕೆ ಕೇಂದ್ರದಿಂದ ಅಗತ್ಯ ನೆರವು ಒದಗಿಸುವುದಾಗಿ ಆಂದ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರಿಗೆ ಭರವಸೆಯಿತ್ತರು.
ಬಿಎಸ್ವೈ ಮನವಿ
ಈ ನಡುವೆ ವಿಶಾಖಪಟ್ಟಣದ ದುರಂತಕ್ಕೆ ಮರುಕ ವ್ಯಕ್ತಪಡಿಸಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ದುರಂತ ಎಚ್ಚರಿಕೆಯ ಪಾಠವಾಗಬೇಕು. ಕೊರೊನಾ ಲಾಕ್ಡೌನ್ ಬಳಿಕ ತಮ್ಮ ಕೈಗಾರಿಕೆಗಳನ್ನು ಆರಂಭಿಸುತ್ತಿರುವ ಕಾರ್ಖಾನೆಗಳ ವ್ಯವಸ್ಥಾಪಕರುಗಳು ಎಲ್ಲಾ ಸುರಕ್ಷಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ನಂತರವೇ ಉತ್ಪಾದನೆ ಆರಂಭಿಸಬೇಕೆಂದು ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡ ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.