ಮಡಿಕೇರಿ, ಮೇ 7: ಕ್ರೀಡಾ ಕ್ಷೇತ್ರದಲ್ಲಿ ಅದರಲ್ಲೂ ಹಾಕಿ ಕ್ರೀಡೆಯಲ್ಲಿ ಸಂಚಲನ ಮೂಡಿಸುವಂತೆ ಮಾಡಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡಂಡ ಎಂ. ಕುಟ್ಟಪ್ಪ ಅವರು ವಿಧಿವಶ ರಾಗಿದ್ದಾರೆ.87 ವರ್ಷ ಪ್ರಾಯದವರಾಗಿದ್ದ ಕುಟ್ಟಪ್ಪ (ಕುಟ್ಟಣಿ) ಅವರು ತಾ. 7 ರಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜವಾಗಿ ಅಸ್ವಸ್ಥಗೊಂಡು ಅಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಅವರು ಬೆ. 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.ಎಸ್‍ಬಿಐನ ನಿವೃತ್ತ ಅಧಿಕಾರಿ ಯಾಗಿದ್ದ ಕುಟ್ಟಪ್ಪ ಅವರು ಮೂಲತಃ ಅರಪಟ್ಟು ಗ್ರಾಮದವರಾಗಿದ್ದು, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿದ್ದರು.ಹಾಕಿ ಕ್ರೀಡೆಯಲ್ಲಿ ಕೊಡವರು ವಿಶೇಷ ಸಾಧನೆ ತೋರಿದ್ದರಾದರೂ ನಂತರದ ವರ್ಷಗಳಲ್ಲಿ ದೇಶವನ್ನು ಪ್ರತಿನಿಧಿಸುವವರ ಸಂಖ್ಯೆ ವಿರಳವಾಗುತ್ತಿದ್ದ ಬಗ್ಗೆ ಚಿಂತನೆ ಹರಿಸಿದ್ದ ಅವರು ತಮ್ಮ ಸಹೋದರ ಕಾಶಿ ಅವರೊಂದಿಗೆ ಸೇರಿ ಹೊಸತೊಂದು ಪರಿಕಲ್ಪನೆಯಂತೆ 1997ರಲ್ಲಿ ಕರಡದಲ್ಲಿ ಕೊಡವ ಕೌಟುಂಬಿಕಗಳ ನಡುವೆ ಪಾಂಡಂಡ ಕಪ್ ಹಾಕಿ ಉತ್ಸವವನ್ನು ಆಯೋಜಿಸಿದ್ದರು.

60 ಕುಟುಂಬಗಳು ಆರಂಭದ ವರ್ಷಗಳಲ್ಲಿ ಪಾಲ್ಗೊಂಡಿದ್ದು, ನಂತರದ ವರ್ಷಗಳಲ್ಲಿ ಈ ಹಾಕಿ ನಮ್ಮೆ ಭಾರೀ ಜನಪ್ರಿಯಗೊಂಡಿತ್ತು.

ಸತತವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಈ ಹಾಕಿ ಉತ್ಸವ 22 ವರ್ಷಗಳ ಕಾಲ ಜರುಗಿದ್ದು, ಪಾಲ್ಗೊಂಡಿದ್ದ ಕುಟುಂಬಗಳ

ಸಂಖ್ಯೆ 325ರ ಗಡಿ ದಾಟಿದ್ದು ವಿಶೇಷವಾಗಿದೆ. ಇದೀಗ 2019ರಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಈ ಬಾರಿ ಕೊರೊನಾ ಕಾರ ದಿಂದಾಗಿ ಉತ್ಸವ ನಡೆದಿರಲಿಲ್ಲ. ಆದರೆ ಜರುಗಿರುವ ಬಹುತೇಕ ಎಲ್ಲಾ ಉತ್ಸವಗಳಲ್ಲಿಯೂ ಕುಟ್ಟಪ್ಪ ಅವರು ಉತ್ಸಾಹದಿಂದಲೇ ತೊಡಗಿಸಿ ಕೊಂಡಿದ್ದರು.

(ಮೊದಲ ಪುಟದಿಂದ) ವಿಶಿಷ್ಟ ರೀತಿಯ ಉತ್ಸವ ಆಯೋಜನೆಯ ಮೂಲಕ ಜನಾಂಗದವರನ್ನು ಬೆಸೆಯುವಂತೆ ಮಾಡಿದ್ದ ಇವರ ಯಶಸ್ಸನ್ನು ಪರಿಗಣಿಸಿ ಇವರಿಗೆ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನ ವಿಶೇಷ ಪ್ರಶಸ್ತಿಯೊಂದಿಗೆ ಇದರಲ್ಲಿ ಇವರ ಹೆಸರೂ ದಾಖಲಾಗಿದೆ. 2015ರಲ್ಲಿ ಕರ್ನಾಟಕ ಸರಕಾರದಿಂದ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಲಭ್ಯವಾಗಿದೆ.

ಮೃತರು ಪತ್ನಿ ಲೀಲಾ, ಪುತ್ರ ಬೋಪಣ್ಣ (ಸುಧೀರ್) ಹಾಗೂ ಪುತ್ರಿಯರಾದ ಬಿದ್ದಾಟಂಡ ಸುಮನ್ ಪ್ರದೀಪ್ ಹಾಗೂ ಬಲ್ಲಚಂಡ ಸುಚಿ ಅವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನೆರವೇರಿತು.

ಸಂತಾಪ: ಕುಟ್ಟಣಿ ಅವರ ನಿಧನಕ್ಕೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಅಖಿಲ ಕೊಡವ ಸಮಾಜ, ಅಂತರ್ರಾಷ್ಟ್ರೀಯ ಹಾಕಿ ಅಂಪೈರ್ ಅಚ್ಚಕಾಳೆರ ಪಳಂಗಪ್ಪ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್, ಚೆಪ್ಪುಡೀರ ಕಾರ್ಯಪ್ಪ, ನಾಪೋಕ್ಲು ಕೊಡವ ಸಮಾಜ, ರಾಜ್ಯ ಬಿಜೆಪಿ ಕಾರ್ಯದರ್ಶಿ ಮನುಮುತ್ತಪ್ಪ, ಹಾಕಿ ಅಭಿಮಾನಿಗಳು ಇವರೊಂದಿಗೆ ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಹಾಕಿ ಪಟುಗಳು ಹಾಕಿ ಉತ್ಸವದಲ್ಲಿ ಭಾಗಿಯಾಗಿರುವ ಹಲವರು, ಕೊಡವ ಹಾಕಿ ಅಕಾಡೆಮಿ ಕಾರ್ಯಕಾರಿ ಸಮಿತಿ, ಕಾರ್ಯಾಧ್ಯಕ್ಷ ಕಾಳೇಂಗಡ ರಮೇಶ್ ಕಾರ್ಯಪ್ಪ, ಕಾರ್ಯದರ್ಶಿ ಅಮ್ಮುಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷರುಗಳಾದ ಮುಕ್ಕಾಟಿರ ಕ್ಯಾಟಿ ಉತ್ತಪ್ಪ, ಕಲಿಯಂಡ ಸಿ. ನಾಣಯ್ಯ, ಮಂಡೇಪಂಡ ಕುಟ್ಟಣ್ಣ, ಕಾನೂನು ಸಲಹೆಗಾರರಾದ ಮಾದಂಡ ಎಸ್. ಪೂವಯ್ಯ, ಆದೇಂಗಡ ತಾರಾ ಅಯ್ಯಮ್ಮ, ಶಾಂತೆಯಂಡ ಕುಟುಂಬಸ್ಥರು, ಕೊಡಗು ಗೌಡ ಯುವವೇದಿಕೆಯ ಆಡಳಿತ ಮಂಡಳಿ ಹಾಗೂ ಸದಸ್ಯರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಮಂಗಲ: ಕೊಡವ ಹಾಕಿ ಉತ್ಸವದ ರೂವಾರಿ ಪಾಂಡಂಡ ಕುಟ್ಟಪ್ಪ ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಗೋಣಿಕೊಪ್ಪದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕುಟ್ಟಪ್ಪ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಪಕ್ಷದ ಮುಖಂಡರಾದ ಮೀದೇರೀರ ನವೀನ್, ಕೊಳ್ಳಿಮಾಡ ಅಜಿತ್, ಧರ್ಮಜ ಉತ್ತಪ್ಪ, ಕುಸುಮ ಜೋಯಪ್ಪ, ಉಮೇಶ್ ಕೇಚಮಯ್ಯ, ಪ್ರಮೋದ್ ಗಣಪತಿ, ಜಮ್ಮಡ ಸೋಮಣ್ಣ ಮತ್ತಿತರರು ಇದ್ದರು.