ಕೊಡಗು ಜಿಲ್ಲೆಗೆ ಕುಶಾಲನಗರ ಹಾಗೂ ಸಂಪಾಜೆ ಮೂಲಕ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ನೆಲೆಸಿರುವವರ ಬರುವಿಕೆಯೊಂದಿಗೆ, ವಿದೇಶಗಳಲ್ಲಿ ವಾಸವಿರುವವರೂ ತಾಯ್ನಾಡಿಗೆ ವಾಪಾಸಾಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಈ ಸಂಜೆ ಕುಶಾಲನಗರ ಚೆಕ್‍ಪೋಸ್ಟ್‍ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ (ಮೊದಲ ಪುಟದಿಂದ) ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಖುದ್ದು ತೆರಳಿ ಪರಿಶೀಲಿಸಿದರು. ಈ ವೇಳೆ ತಹಶೀಲ್ದಾರ್ ಗೋವಿಂದ್‍ರಾಜ್, ಡಿವೈಎಸ್‍ಪಿ ಶೈಲೇಂದ್ರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಆರೋಗ್ಯ, ಕಂದಾಯ, ಆಶಾ ಕಾರ್ಯಕರ್ತರು ಮತ್ತು ಪೊಲೀಸರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದರು.ಕೊಪ್ಪ ಹಾಗೂ ಕುಶಾಲನಗರದ ಭೂ ಮಾಲೀಕರು ಕೃಷಿ ಇಲಾಖಾ ಉಪನಿರ್ದೇಶಕರಿಂದ ಪಾಸ್ ಪಡೆದು ನಿತ್ಯ ಸಂಚರಿಸಲು ಅವಕಾಶವಿದೆ. ಅಗತ್ಯ ದಾಖಲೆಗಳೊಂದಿಗೆ ವ್ಯಾಪಾರ ವಹಿವಾಟುದಾರರು ಕುಶಾಲನಗರ ಡಿವೈಎಸ್‍ಪಿಯಿಂದ ಪಾಸ್ ಪಡೆಯಲು ಹಾಗೂ ಉದ್ಯೋಗಿಗಳು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಮತ್ತು ಕೊಪ್ಪದ ವರ್ತಕರು ಕುಶಾಲನಗರಕ್ಕೆ ಬರಬೇಕಾದರೆ ಹುಣಸೂರು ಡಿವೈಎಸ್‍ಪಿಯಿಂದ ಪಾಸ್ ಪಡೆಯಲು ಡಿಸಿ, ಎಸ್‍ಪಿ ಅನುವು ಮಾಡಿಕೊಟ್ಟಿದ್ದಾರೆ.
ಅಲ್ಲದೇ ವಿದೇಶಗಳಿಂದಲೂ ಪ್ರಯಾಣಿಕರು ಬರುವ ಸಾಧ್ಯತೆಯಿರುವದರಿಂದ ಅಂತರ ಜಿಲ್ಲಾ, ಅಂತರರಾಜ್ಯ ಪ್ರಯಾಣಿಕರ ತಪಾಸಣೆಯಂತೆ ವಿದೇಶಿಯರನ್ನು ತಪಾಸಣೆಗೊಳಿಸಲು ಪ್ರತ್ಯೇಕ ವ್ಯವಸ್ಥೆ ಮಾಡುವಂತೆಯೂ ಜಿಲ್ಲಾಧಿಕಾರಿಗಳು ಸೂಚನೆಯಿತ್ತರು.
ಈ ನಡುವೆ ಮೂರ್ನಾಡುವಿನಿಂದ ಮಕ್ಕಳು ಸೇರಿದಂತೆ 19 ಮಂದಿ ಕೂಲಿ ಕಾರ್ಮಿಕರು ಪಾದಚಾರಿಗಳಾಗಿಯೇ ಕೊಪ್ಪ ಗೇಟ್ ಬಳಿ ತಲುಪಿ ಸೇಲಂಗೆ ತೆರಳುವ ಪ್ರಯತ್ನ ನಡೆಸಿದರು. ಆದರೆ, ಆ ಮಂದಿಯನ್ನು ಜಿಲ್ಲಾಧಿಕಾರಿ ಮರಳಿ ಮೂರ್ನಾಡುವಿಗೆ ಕಳುಹಿಸಿದರು. ಈ ಮಂದಿ ಮೂರ್ನಾಡುವಿನಲ್ಲಿ ತೋಟ ಕಾರ್ಮಿಕರಾಗಿದ್ದಾರೆ.
(ವರದಿ : ಚಂದ್ರಮೋಹನ್)