ಮಡಿಕೇರಿ, ಮೇ 7: ಕಳೆದ 48 ಗಂಟೆಗಳಿಂದ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯದಿಂದ ತವರು ಜಿಲ್ಲೆ ಕೊಡಗಿಗೆ 3500ಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಈ ಪೈಕಿ ತಮಿಳುನಾಡಿನಿಂದ ಕುಶಾಲನಗರ ಮೂಲಕ ಮರಳಿರುವ 10 ಮಂದಿ ಹಾಗೂ ಸಂಪಾಜೆಗಾಗಿ ಕೇರಳದಿಂದ ಮರಳಿದ 13 ಮಂದಿಯನ್ನು ನೇರ ಹೋಂ ಕ್ವಾರೆಂಟೈನ್‍ಗೆ ಒಳಪಡಿಸಲಾಗಿದೆ. ಈ ನಡುವೆಯೂ ತವರಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾಹಿತಿ ಲಭಿಸಿದೆ.ಇನ್ನುಳಿದ ಎಲ್ಲರೂ ಕೂಡ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದವರು ಮರಳಿ ತವರಿಗೆ ಬಂದಿದ್ದು,
(ಮೊದಲ ಪುಟದಿಂದ) ಅವರುಗಳನ್ನು ಪೂರ್ವಭಾವೀ ಆರೋಗ್ಯ ತಪಾಸಣೆಗೆ ಒಳಪಡಿಸ ಲಾಯಿತು. ಆದರೆ, ಕರ್ನಾಟಕದ ಒಳಗೆ ಅಂತರ ಜಿಲ್ಲಾ ಪ್ರಯಾಣಿಕರಿಗೆ ಗೃಹಪರಿವೀಕ್ಷಣೆಗೆ ಒಳಪಡಬೇಕಾದ ಸೀಲ್ ಹಾಕುವ ಕ್ರಮವನ್ನು ಬುಧವಾರ ಮಧ್ಯಾಹ್ನದಿಂದಲೇ ಕೈ ಬಿಡಲಾಗಿದೆ. ಕೇವಲ ಅಂತರ ರಾಜ್ಯ ಪ್ರಯಾಣಿಕರಿಗೆ ಮಾತ್ರ ಸೀಲ್ ಹಾಕಲಾಗುತ್ತಿದೆ. ಅಂತರ ಜಿಲ್ಲಾ ಪ್ರಯಾಣಿಕರಿಗೆ ಪೂರ್ವಭಾವೀ ಆರೋಗ್ಯ ತಪಾಸಣೆಯನ್ನು ಎಂದಿನಂತೆ ನಡೆಸಲಾಗುತ್ತದೆ. ಆದರೆ ಕೈಗೆ ಸೀಲ್ ಹಾಕುವದಿಲ್ಲ. ಬದಲಿಗೆ ಚೀಟಿಯೊಂದರಲ್ಲಿ ಸೀಲ್ ಹಾಕಿ ಕೊಡಲಾಗುತ್ತಿದೆ. 14 ದಿನ ಮನೆಯಲ್ಲಿರಿ ಎಂದು ಬಾಯಿಯಲ್ಲಿ ಹೇಳಲಾಗುತ್ತಿದೆ. ಮೂಲವೊಂದರ ಪ್ರಕಾರ ಕೈಗೆ ಸೀಲ್ ಹಾಕುವಾಗ ಒಂದೇ ಸೀಲನ್ನು ಎಲ್ಲರಿಗೂ ಹಾಕುವದರಿಂದ ವೈರಸ್ ಹರಡಲು ಕಾರಣವಾಗುತ್ತದೆ ಎನ್ನುವ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಇದೀಗ ಸೀಲ್ ಹಾಕುವ ಕ್ರಮವನ್ನು ಕೈ ಬಿಟ್ಟು ಕಾಗದದ ಚೀಟಿಯೊಂದರಲ್ಲಿ ಸೀಲ್ ಹಾಕಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಕಳೆದೆರಡು ದಿನಗಳಿಂದ ಮೂಲತಃ ಕೊಡಗಿನ ವರು, ಬೇರೆ ಬೇರೆ ಜಿಲ್ಲೆಗಳಿಂದ ತಮ್ಮ ತವರಿಗೆ ಆಗಮಿಸಿದ್ದಾಗಿದೆ ಎಂದು ಕುಶಾಲನಗರ ಗಡಿ ತಪಾಸಣೆಯ ಹೊಣೆಗಾರಿಕೆ ನೋಡಿಕೊಳ್ಳುತ್ತಿರುವ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ್‍ರಾಜು ಖಚಿತಪಡಿಸಿ ದ್ದಾರೆ. ಅಲ್ಲದೆ ಇಂದು ಅಂತರರಾಜ್ಯ ತಮಿಳುನಾಡಿನಿಂದ 10 ಮಂದಿ ಬಂದಿದ್ದು, ಅವರುಗಳಿಗೆ ಮುದ್ರೆಯೊಂದಿಗೆ ಕಡ್ಡಾಯ ಗೃಹತಡೆ ವ್ಯವಸ್ಥೆಗೆ ಕಳುಹಿಸಲಾಗಿದೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ. ಇತ್ತ ಸಂಪಾಜೆ ಮೂಲಕ ಕಾಸರಗೋಡುವಿನಿಂದ ಇಂದು 13 ಮಂದಿ ಹೊರತು ಎಲ್ಲರೂ ನೆರೆಯ ದಕ್ಷಿಣ ಕನ್ನಡದಿಂದ ತವರು ಕೊಡಗು ಜಿಲ್ಲೆಗೆ ಬಂದವರಾಗಿದ್ದಾರೆ ಎಂದು ಉಸ್ತುವಾರಿ ಅಧಿಕಾರಿ ಲಕ್ಷ್ಮೀ ದೃಢಪಡಿಸಿದ್ದಾರೆ.
ಸಂಪಾಜೆಗಾಗಿ ಆಗಮನ
ಕೊಡಗು - ದಕ್ಷಿಣ ಕನ್ನಡ ಗಡಿ ಸಂಪಾಜೆಯ ಚೆಕ್‍ಪೋಸ್ಟ್ ಮೂಲಕ ಕಳೆದ 48 ಗಂಟೆಗಳಲ್ಲಿ 616 ಮಂದಿ ಇಂದು ಮಧ್ಯಾಹ್ನ ತನಕ ಜಿಲ್ಲೆಗೆ ಆಗಮಿಸಿದ್ದಾರೆ. ಈ ಪೈಕಿ ಕೇರಳದ ಕಾಸರಗೋಡುವಿನಿಂದ ವೀರಾಜ ಪೇಟೆ ಸಮೀಪದ ಬಿಟ್ಟಂಗಾಲದ ಅಂಬಟ್ಟಿ ನಿವಾಸಿಯೊಬ್ಬರು ತನ್ನ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳೊಂದಿಗೆ ಇಂದು ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದಾರೆ. ಇತರ 9 ಮಂದಿ ಕೇರಳದಿಂದ ಬೇರೆ ವಾಹನಗಳಲ್ಲಿ ಮರಳಿದ್ದಾರೆ. ಭಾರತ ಲಾಕ್‍ಡೌನ್ ನಡುವೆ ಕಳೆದ ಒಂದೂವರೆ ತಿಂಗಳಿನಿಂದ ಕಾಸರಗೋಡುವಿನಲ್ಲಿ ಸಿಲುಕಿ ಕೊಂಡಿದ್ದ ಪಿ.ಎಂ. ಹನೀಫ್ ದ್ವಿಚಕ್ರ ವಾಹನದಲ್ಲಿ (ಕೆ.ಎ. 02 ಹೆಚ್.ಇ. 2058) ತನ್ನ ಪತ್ನಿ ಫಾತಿಮಾ ಹಾಗೂ ಐದು, ಮೂರು ವರ್ಷದ ಮಕ್ಕಳೊಂದಿಗೆ ತವರಿಗೆ ಮರಳಿದ್ದಾರೆ.
ಈ ಕುಟುಂಬವನ್ನು ಸಂಪಾಜೆ ಸರಕಾರಿ ಶಾಲೆಯ ಶಿಬಿರದಲ್ಲಿ ಆರೋಗ್ಯ ತಪಾಸಣೆ ಬಳಿಕ ಮುದ್ರೆ ಹಾಕಿ, 14 ದಿನಗಳ ಕಡ್ಡಾಯ ಕ್ವಾರಂಟೈನ್‍ಗೆ ಆದೇಶಿಸಲಾಗಿದೆ. ಇನ್ನುಳಿದಂತೆ ಬಹುತೇಕ ಮಂದಿ ದಕ್ಷಿಣ ಕನ್ನಡ, ಉಡುಪಿ ಇತರೆಡೆ ಗಳಿಂದ 327 ಸಂಖ್ಯೆಯಲ್ಲಿ ಬಂದಿದ್ದಾರೆ. ಇನ್ನುಳಿದ ಕೆಲವರು ಮಡಿಕೇರಿ, ಕುಶಾಲನಗರ ಮೂಲಕ ಮೈಸೂರು, ಬೆಂಗಳೂರು ಮೊದಲಾದೆಡೆಗೆ ಪ್ರಯಾಣಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸುಳ್ಯ ಎಪಿಎಂಸಿ ಉದ್ಯೋಗಿ ರೇವಣ್ಣ ಹಾಗೂ ಸಂಸಾರ ಕೂಡ ಮೈಸೂರಿನಲ್ಲಿ ಸಂಬಂಧಿಯೊಬ್ಬರ ಸಾವಿನಲ್ಲಿ ಪಾಲ್ಗೊಳ್ಳಲು ವಿಶೇಷ ಅನುಮತಿಯೊಂದಿಗೆ ಈ ಬೆಳಿಗ್ಗೆ ಪ್ರಯಾಣಿಸಿದ ದೃಶ್ಯ ಎದುರಾಯಿತು. ಹೀಗೆ ವಿವಿಧ ಕಾರಣಗಳಿಂದ ಕೊಡಗು ಮತ್ತು ಬೇರೆ ಜಿಲ್ಲೆಗಳಿಗೆ ಹೊರಟಿರುವ ಮಂದಿಯನ್ನು ಸಂಪಾಜೆ ಗೇಟ್‍ನಲ್ಲಿ ವಾಹನ ಸಹಿತ ಆರೋಗ್ಯ ತಪಾಸಣೆಗೆ ಒಳಪಡಿಸಿ, ಆರೋಗ್ಯದ ಮೇಲೆ ನಿಗಾ ವಹಿಸುವದು ಸೇರಿದಂತೆ ಸಾರ್ವ ಜನಿಕ ಅಂತರಕಾಯ್ದು ಕೊಂಡು, ಸರಕಾರದ ನಿಯಮಗಳ ಪಾಲನೆಗೆ ನಿರ್ದೇಶಿಸಿ ಕಳುಹಿಸಿ ಕೊಡುತ್ತಿದ್ದ ಚಿತ್ರಣ ಎದುರಾಯಿತು.
ಮಡಿಕೇರಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಕವಿತಾ ಸೇರಿದಂತೆ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸಿಬ್ಬಂದಿ, ನಿಯೋಜಿತ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಹಾಗೂ ಕಂದಾಯ ಸಿಬ್ಬಂದಿ ಕರ್ತವ್ಯನಿರತರಾಗಿದ್ದರು.
ಪ್ರೊಬೆಷನರಿ ಪೊಲೀಸ್ ಉಪ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಸಹಾಯಕ ಉಪ ನಿರೀಕ್ಷಕರಾದ ಮಾಚಯ್ಯ, ಶ್ರೀಧರ್, ರಾಜೇಶ್ ಹಾಗೂ ಇತರ ಪೊಲೀಸರು ಮತ್ತು ಕಂದಾಯ ನಿರೀಕ್ಷಕ ಸದಾನಂದ, ಅರಣ್ಯ ಸಿಬ್ಬಂದಿ ಪುನೀತ್, ಗ್ರಾಮ ಲೆಕ್ಕಿಗರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸರದಿಯಲ್ಲಿ ನಿಗದಿತ 8 ಗಂಟೆಗಳ ಕರ್ತವ್ಯದೊಂದಿಗೆ ಹಗಲಿರುಳು ನಿಗಾ ವಹಿಸಿದ್ದು ಕಂಡು ಬಂತು.
ಈ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಂಪಾಜೆ ಶಾಲೆಯಲ್ಲಿ ಉಪಹಾರ, ಊಟವನ್ನು ಕಲ್ಪಿಸಿದ್ದಾಗಿ ಮಾಹಿತಿ ಲಭಿಸಿತು. ಒಟ್ಟಿನಲ್ಲಿ ಸಂಪಾಜೆ ಗೇಟ್‍ನಲ್ಲಿ ಕೊಡಗಿಗೆ ಬರುವವರು ಮತ್ತು ಹೊರ ಹೋಗು ವವರ ಕಡೆಗೆ ಸದಾ ನಿಗಾವಿರಿಸಿದ್ದು, ಯಾವದೇ ಗೊಂದಲವಿರಲಿಲ್ಲ. ಈ ರೀತಿ ಸಂಚರಿಸುವ ಹೆಚ್ಚಿನ ವಾಹನಗಳು ಅಗತ್ಯ ವಸ್ತುಗಳ ಸಾಗಾಣಿಕೆಗೆ ಸಂಬಂಧಿಸಿದ್ದಾಗಿವೆ ಎಂದು ಪೊಲೀಸ್ ಉಪ ನಿರೀಕ್ಷಕ ಪ್ರಕಾಶ್ ಹಾಗೂ ಕಂದಾಯ ನಿರೀಕ್ಷಕ ಸದಾನಂದ ಮಾಹಿತಿ ನೀಡಿದರು.
-ಶ್ರೀಸುತ