ಕುಶಾಲನಗರ, ಮೇ 6: ಕೊಡಗು ಮೈಸೂರು ಗಡಿಭಾಗದ ಕುಶಾಲನಗರ ಹಾಗೂ ಕೊಪ್ಪ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಲು ಎರಡು ಜಿಲ್ಲೆಗಳ ಪೆÇಲೀಸ್ ಅಧಿಕಾರಿಗಳು ಸಭೆ ನಡೆಸಿದರು. ಎರಡು ಜಿಲ್ಲೆಗಳ ಪೆÇಲೀಸ್ ಉಪಾಧೀಕ್ಷಕರು ಪೆÇಲೀಸ್ ವೃತ್ತ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ಈ ಬಗ್ಗೆ ಸಭೆಯಲ್ಲಿ ಮಾತನಾಡಿ, ಗಡಿ ಭಾಗದ ಜನರಿಗೆ ಆಗುತ್ತಿರುವ ಅನಾನುಕೂಲಗಳ ಕುರಿತು ಚರ್ಚಿಸಿದರು. ಕುಶಾಲನಗರ ಮತ್ತು ಕೊಪ್ಪ ಭಾಗದ ಜನರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಓಡಾಟಕ್ಕೆ ಸಂಬಂಧಿಸಿದಂತೆ ‘ಗ್ರೀನ್ ಪಾಸ್’ ಪಡೆದು ಕೊಳ್ಳುವುದು, ಎರಡು ಕಡೆಯ ವ್ಯಾಪಾರಿಗಳಿಗೆ ಓಡಾಡುವ ನಿಟ್ಟಿನಲ್ಲಿ ಪಾಸುಗಳನ್ನು ಪಡೆದು ಕೊಳ್ಳುವುದು ಹಾಗೂ ಉದ್ಯೋಗಿಗಳಿಗೆ ಕೆಲಸಕ್ಕೆ ತೆರಳಲು ತೆಗೆದುಕೊಳ್ಳ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್ ಹುಣಸೂರು ಡಿವೈಎಸ್ಪಿ ಸುಂದರರಾಜ್, ಪೆÇಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರದೀಪ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.ಗಡಿಯಲ್ಲಿ ವಾಹನ ದಟ್ಟಣೆ ಲಾಕ್‍ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ಕೊಡಗು (ಮೊದಲ ಪುಟದಿಂದ) ಜಿಲ್ಲೆಯ ಮೂಲಕ ಮೈಸೂರು ಕಡೆಗೆ ತೆರಳುವ ವಾಹನಗಳ ಸಂಖ್ಯೆ ದಿನಗಳೆದಂತೆ ಏರಿಕೆಯಾಗುತ್ತಿದೆ. ಕುಶಾಲನಗರ ಕೊಪ್ಪ ಗಡಿಭಾಗದಲ್ಲಿರುವ ಪೊಲೀಸ್ ತಪಾಸಣಾ ಕೇಂದ್ರದ ಮೂಲಕ ಇದುವರೆಗೆ ಸಾವಿರಾರು ಸಂಖ್ಯೆಯ ವಾಹನಗಳು ಮೈಸೂರು ಮಾರ್ಗ ಮೂಲಕ ಬೆಂಗಳೂರು ಮತ್ತಿತರ ಸ್ಥಳಗಳಿಗೆ ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಕೊಡಗಿನಿಂದ ಮೈಸೂರು ಕಡೆಗೆ ತೆರಳುವ ಸಂದರ್ಭ ತಪಾಸಣಾ ಕೇಂದ್ರದಲ್ಲಿ ಹೊರಹೋಗುವ ವಾಹನಗಳ ವಿವರ ಮತ್ತು ಪ್ರಯಾಣಿಕರ ಮಾಹಿತಿ ನೀಡಲು ಜನರು ನಡು ರಸ್ತೆಯಲ್ಲಿ ಬಿಸಿಲಲ್ಲಿ ನಿಂತು ಪರದಾಡಬೇಕಾದ ಸ್ಥಿತಿ ಎದುರಾಗಿದೆ. ಮಕ್ಕಳು ವೃದ್ಧರೆನ್ನದೆ ತಮ್ಮ ಸ್ಥಳಗಳಿಗೆ ತೆರಳಲು ತಪಾಸಣಾ ಕೇಂದ್ರದ ಬಳಿ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಗೋಚರಿಸುತ್ತಿದೆ.

ಈ ನಡುವೆ ಸರಕು ಸಾಮಗ್ರಿಗಳನ್ನು ತುಂಬಿದ ವಾಹನಗಳು, ಸರಕಾರಿ ಉದ್ಯೋಗಕ್ಕೆ ತೆರಳುವ ಜನರು ಹಾಗೂ ಸರಕಾರಿ ವಾಹನಗಳ ಸಂಚಾರಗಳ ಒತ್ತಡದಿಂದ ಬಹುತೇಕ ‘ಟ್ರಾಫಿಕ್ ಜಾಂ’ ಆಗುತ್ತಿರುವುದು ಬೆಳವಣಿಗೆಯಾಗಿದೆ. ಇನ್ನೊಂದೆಡೆ ಮೈಸೂರು ಕಡೆಯಿಂದ ಕೊಡಗು ಜಿಲ್ಲೆಗೆ ಆಗಮಿಸುವ ವಾಹನಗಳು ಮೈಸೂರು ಜಿಲ್ಲೆಯ ಪೊಲೀಸ್ ತಪಾಸಣಾ ಕೇಂದ್ರ ದಾಟಿ ನಂತರ ಪರಿಶೀಲನೆಗಾಗಿ ಕೊಪ್ಪ ಕಾವೇರಿ ಸೇತುವೆ ಮೇಲ್ಭಾಗದಲ್ಲಿ ಸಾಲುಗಟ್ಟಿ ನಿಲ್ಲುವ ದೃಶ್ಯವನ್ನು ಕಳೆದ 3 ದಿನಗಳಿಂದ ಕಾಣಬಹುದಾಗಿದೆ.

ಈಗಾಗಲೇ 2,310 ಮಂದಿ ಕೊಪ್ಪ ಗಡಿ ಮೂಲಕ ಜಿಲ್ಲೆಗೆ ಪ್ರವೇಶಿಸಿದ್ದು ಅವರೆಲ್ಲರಿಗೂ ಕ್ವಾರಂಟೇನ್ ಸೀಲ್ ಹಾಕಿ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಮಾಹಿತಿ ಒದಗಿಸಿದ್ದಾರೆ. ಮೂರು ಪಾಳಿಯಲ್ಲಿ ತಲಾ 20 ಮಂದಿ ಇಲಾಖಾ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು ಇವರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಿಂದ ಹೊರ ಪ್ರದೇಶಗಳಿಗೆ ತೆರಳಿದವರೂ ಸೇರಿದಂತೆ 10 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ.

ಕೊಪ್ಪ ಸೇತುವೆ ಬಳಿ ಮಾತ್ರ ಪೊಲೀಸರಿಗೆ ವಾಹನಗಳ ಒತ್ತಡದೊಂದಿಗೆ ಜನರ ಮಾಹಿತಿ ಸಂಗ್ರಹಿಸಿ ಅವರಿಗೆ ಪಾಸ್ ನೀಡುವುದೇ ತಲೆನೋವಾಗಿ ಪರಿಣಮಿಸಿದೆ. ಒಂದೆಡೆ ವಾಹನಗಳ ಸಂಚಾರ ನಿಯಂತ್ರಣ ಮಾಡುವುದು, ಇನ್ನೊಂದೆಡೆ ಮಾಹಿತಿ ಕಲೆಹಾಕಿ ಹೊರಜಿಲ್ಲೆಗಳಿಗೆ ತೆರಳಲು ಅನುಮತಿ ಪತ್ರ ನೀಡುವುದು ಒತ್ತಡದ ಕೆಲಸವಾಗಿದ್ದು ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ನಿರ್ವಹಿಸಬೇಕಾಗಿದೆ.

ಮಹಿಳಾ ಸಿಬ್ಬಂದಿಗಳು ದಿನದ 12 ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕಾಗಿದ್ದು ಕಳೆದ ಎರಡು ತಿಂಗಳಿನಿಂದ ಹೈರಾಣಾಗಿ ಹೋಗಿದ್ದಾರೆ ಎಂದರೆ ತಪ್ಪಾಗ ಲಾರದು. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಕೂಡ ಸೇವಿಸಲು ಕರ್ತವ್ಯದ ಒತ್ತಡ ಅಡ್ಡಿಯುಂಟು ಮಾಡುತ್ತಿದೆ. ಈ ನಡುವೆ ಪ್ರಯಾಣಿಕರ ಕೋಪತಾಪದ ಮಾತುಗಳು ಕೂಡ ಇವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎನ್ನುವಂತಾಗಿದೆ.

ಅಂತರ ಜಿಲ್ಲೆಗೆ ನಿರ್ಬಂಧ ಸಡಿಲಿಕೆ

ಇದೀಗ ಕೊಪ್ಪ ಮತ್ತು ಕುಶಾಲನಗರ ಗಡಿ ದ್ವಾರಗಳಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಪ್ರಯಾಣಿಕರು ತೆರಳುತ್ತಿದ್ದಾರೆ. ಹೊರ ರಾಜ್ಯಗಳ, ಹೊರ ಜಿಲ್ಲೆಗಳಲ್ಲಿ ಲಾಕ್ ಡೌನ್ ಬಳಿಕ ಅಲ್ಲಿಯೇ ಸ್ಥಗಿತಗೊಂಡಿದ್ದ ಕೊಡಗಿನ ಜನರು, ವಲಸೆ ಕಾರ್ಮಿಕರು ಗಡಿ ಪ್ರÀದೇಶದಿಂದ ಜಿಲ್ಲೆಗೆ ಮರಳುತ್ತಿದ್ದಾರೆ. ಅದೇ ರೀತಿ ಕೊಡಗಿನಲ್ಲಿ ಸ್ಥಗಿತಗೊಂಡಿದ್ದ ಹೊರ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ಮಂದಿ ಗಡಿಯಿಂದಾಚೆÀಗೆ ತೆರಳುತ್ತಿದ್ದಾರೆ. ಈ ಸಂದರ್ಭ ಪ್ರತಿಯೊಬ್ಬರನ್ನೂ ಗೃಹ ಪರಿವೀಕ್ಷಣೆಯಲ್ಲ್ಲಿಡಲು ಕೈಗೆ ಸೀಲ್ ಹಾಕಲಾಗುತ್ತಿತ್ತು. ಇದೀಗ ಈ ಗಡಿ ಪ್ರದೇಶಗಳÀಲ್ಲಿ ಕರ್ನಾಟಕದ ಒಳಗಿನ ಅಂತರ ಜಿಲ್ಲಾ ಪ್ರಯಾಣಿಕರಿಗೆ ಕೆಲವು ನಿರ್ಬಂಧ ಸಡಿಲಿಕೆಯಾಗಿದೆ. ಕರ್ನಾಟಕದ ವ್ಯಕ್ತಿಗಳಾಗಿದ್ದು ಅಂತರ ಜಿಲ್ಲಾ ಪ್ರಯಾಣಿಕರಾಗಿದ್ದರೆ ಅಂತಹವರ ಆರೋಗ್ಯ ತಪಾಸಣೆ ಸಂದರ್ಭ ಕೋವಿಡ್-19 ರ ಯಾವದೇ ಪೂರ್ವಭಾವೀ ಲಕ್ಷಣಗಳಿಲ್ಲದ ವ್ಯಕ್ತಿಗಳ ಕೈಗೆ ಸೀಲ್ ಹಾಕುವ ಅವಶ್ಯಕತೆಯಿಲ್ಲ ಅಥವಾ ಅವರನ್ನು 14 ದಿನಗಳ ಕಾಲ ಗೃಹ ಪರಿವೀಕ್ಷಣೆಗೆ ಒಳಪಡಿಸಬೇಕಾಗಿಲ್ಲ. ಆದರೆ, ಗಡಿಯಲ್ಲಿ ಆರೋಗ್ಯ ತಪಾಸಣೆ ಸಂದÀರ್ಭ ಕೋವಿಡ್-19 ರ ರೋಗ ಲಕ್ಷಣದ ಮುನ್ಸೂಚನೆಯ ಕಿಂಚಿತ್ ಲಕ್ಷಣ ಕಂಡುಬಂದರೆ ಮಾತ್ರÀ ಅಂತಹವರ ಕೈಗೆ ಸೀಲ್ ಹಾಕುವ ಮೂಲಕ ಗೃಹ ಪರಿವೀಕ್ಷಣೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.

ಉಳಿದಂತೆ ಪ್ರಾರಂಭಿಕವಾಗಿ ಗಡಿ ದ್ವಾರದಲ್ಲಿ ಎಲ್ಲ ಪ್ರಯಾಣಿಕರ ಮಾಹಿತಿ ಸಂಗ್ರಹ, ದೇಹದ ತಾಪ ಮಾಪನ ಇತ್ಯಾದಿ ಪೂರ್ವಭಾವಿ ಮುನ್ನೆಚ್ಚರಿಕಾ ಪರಿಶೀಲನೆಗಳನ್ನು ಎಂದಿನಂತೆ ಕೈಗೊಳ್ಳುವಂತೆಯೂ ಖಚಿತಪಡಿಸಲಾಗಿದೆ. ಆದರೆ, ಅಂತರ ರಾಜ್ಯ ಪ್ರಯಾಣಿಕರಿಗೆ ಅಂದರೆ, ಇತರ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಬರುವ ಅಥವಾ ಜಿಲ್ಲೆಯಿಂದ ಇತರ ರಾಜ್ಯಗಳಿಗೆ ಪ್ರಯಾಣಿಸುವ ಮಂದಿಗೆ ರೋಗ ಲಕ್ಷಣವಿರಲಿ ಇಲ್ಲದಿರಲಿ ಕೈಗೆ ಸೀಲು ಹಾಕುವದನ್ನು ಹಾಗೂ ಗೃಹ ಪರಿವೀಕ್ಷಣೆಯನ್ನು ಕಡ್ಡಾಯವಾಗಿ ಯಥಾವತ್ತಾಗಿ ಮುಂದುವರಿಸ ಲಾಗಿದೆ. (ವರದಿ: ಚಂದ್ರಮೋಹನ್)