ಬೆಂಗಳೂರು, ಮೇ 6: ಮಾರಕ ಕೊರೊನಾ ವೈರಸ್ ಹಾವಳಿಯಿಂದ ಲಾಕ್‍ಡೌನ್ ನಿಯಮಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನರ ನೆರವಿಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೂ. 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜನ್ನು ಘೋಷಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಎಂ ಈ ಕುರಿತು ವಿವರ ನೀಡಿದರು. ಅಗಸರು ಹಾಗೂ ಸವಿತಾ ಸಮುದಾಯದವರಿಗೆ ಒಂದು ಬಾರಿಗೆ ತಲಾ 5 ಸಾವಿರ ರೂ ಪರಿಹಾರ ನೀಡಲಾಗುವುದು. ಇದರಿಂದ ಸುಮಾರು 60 ಸಾವಿರ ಅಗಸರು ಹಾಗೂ 2 ಲಕ್ಷದ 30 ಸಾವಿರ ಸವಿತಾ ಸಮುದಾಯದವರಿಗೆ ಈ ನೆರವು ದೊರೆಯಲಿದೆ.ರಾಜ್ಯದಲ್ಲಿರುವ 7 ಲಕ್ಷದ 75 ಸಾವಿರ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ನೀಡಲಾಗುವುದು. ತರಕಾರಿ ಹಾಗೂ ಹಣ್ಣು ಬೆಳೆಗಾರರು ಸಂಕಷ್ಟದಲ್ಲಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಲಾಗುವುದು ಎಂದರು. ಕಳೆದ ಒಂದೂವರೆ ತಿಂಗಳಿನಿಂದ ಲಾಕ್‍ಡೌನ್‍ನ ಪರಿಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರು ವುದರಿಂದ ಎಲ್ಲ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸಿ ದ್ದಾರೆ. ಲಾಕ್ ಡೌನ್ ನಿಂದಾಗಿ ಎಲ್ಲ ದೇವಾಲಯಗಳು ಮುಚ್ಚಿರುವುದರಿಂದ ಹಬ್ಬ ಮದುವೆ, ಸಭೆ-ಸಮಾರಂಭಗಳು ಹಾಗೂ ಮತ್ತಿತರ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದರಿಂದ ಹೂವುಗಳ ಬೇಡಿಕೆ ಇಲ್ಲದೇ ಹೂವು ಬೆಳೆಗಾರರು ತಾವು ಬೆಳೆದಿರುವ ಎಲ್ಲ ಹೂವುಗಳನ್ನು ತಮ್ಮ ಹೊಲದಲ್ಲೇ ನಾಶ ಮಾಡುವ ಪರಿಸ್ಥಿತಿ ಉದ್ಭವಿಸಿದೆ. ಒಟ್ಟಾರೆ 11687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಇದರಿಂದ ಎಲ್ಲ ರೀತಿಯ ಹೂವುಗಳು ಬೆಳೆದಿರುವ ರೈತರಿಗೆ ನೆರವಾಗಲು ಸರ್ಕಾರವು ಹೆಕ್ಟೇರ್ ಗೆ ಗರಿಷ್ಠ 25,000 ರೂ.ಗಳಂತೆ ಪರಿಹಾರ ನೀಡಲಿದೆ.
ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಡೆಸುವ ಉದ್ದಿಮೆದಾರರು ತಮ್ಮ ಉದ್ದಿಮೆ ಗಳನ್ನು ತೆರೆಯಲಾಗದೆ ಹಾಗೂ ತಮ್ಮ ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡಲಾಗದೆ ನಷ್ಟವನ್ನು ಅನುಭವಿಸಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ವಹಿವಾಟು ಚೇತರಿಕೆಯಾಗಲು ಕೆಲವು ತಿಂಗಳ ಸಮಯ ಬೇಕಾಗಿರುವುದರಿಂದ ಇವರಿಗೆ ಸರಕಾರ ನೆರವು ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ ಅತಿಸಣ್ಣ, ಸಣ್ಣ ಹಾಗೂ ಮದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ನಿಗದಿತ ಚಾರ್ಜ್ ಅನ್ನು ಎರಡು ತಿಂಗಳ ಅವಧಿಗೆ ಪೂರ್ತಿಯಾಗಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಹಾಗೆಯೇ ಬೃಹತ್ ಕೈಗಾರಿಕೆಗಳ ವಿದ್ಯುತ್ ಚಾರ್ಜ್ ಪಾವತಿಯನ್ನು ಎರಡು ತಿಂಗಳ ಅವಧಿಗೆ ಯಾವುದೇ ಬಡ್ಡಿ ಅಥವಾ ದಂಡ ಇಲ್ಲದೇ ಬಡ್ಡಿ ರಹಿತವಾಗಿ ಮುಂದೂಡಲಾಗುವುದು. ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸುವ ಗ್ರಾಹಕರಿಗೆ ಪೆÇ್ರೀತ್ಸಾಹ ರಿಯಾಯಿತಿಯನ್ನು ನೀಡುವುದು. ವಿಳಂಬ ಪಾವತಿಗಾಗಿ ವಿದ್ಯುತ್ ಬಿಲ್ಲಿನ ಮೊತ್ತದ ಮೇಲೆ ವಿಧಿಸುವ ಬಡ್ಡಿಯನ್ನು ಕಡಿಮೆಗೊಳಿಸಲಾಗುವುದು.
ಕಂದಾಯ ಬಾಕಿ ಮೊತ್ತವನ್ನು ಕಂತುಗಳಲ್ಲಿ ಭಾಗವಾಗಿ ಪಾವತಿಸಲು ಅವಕಾಶ ಕಲ್ಪಿಸಲಾಗುವುದು. ಕಂದಾಯ ಬಾಕಿ ಮೊತ್ತವನ್ನು ಪಾವತಿಸದಿರುವ ಗ್ರಾಹಕರಿಗೆ 30.06.2020 ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವದಿಲ್ಲ.
ನೇಕಾರರಿಗೆ ಈ ಲಾಕ್ ಡೌನ್ ನಿಂದಾಗಿ ಮತ್ತಷ್ಟು ನಷ್ಟ ಉಂಟಾಗಿದೆ. ಸರ್ಕಾರವು ಈಗಾಗಲೇ ನೇಕಾರರಿಗೆ ನೆರವಾಗಲು (ಮೊದಲ ಪುಟದಿಂದ) 109 ಕೋಟಿ ರೂ.ಗಳ ವೆಚ್ಚದಲ್ಲಿ “ನೇಕಾರರ ಸಾಲ ಮನ್ನಾ ಯೋಜನೆ”ಯನ್ನು ಘೋಷಿಸಿದೆ. ಈ ಯೋಜನೆಗೆ ಈಗಾಗಲೇ ಹಿಂದಿನ ವರ್ಷ 29 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ 80 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಿ ನೇಕಾರರಿಗೆ ಹೊಸ ಸಾಲಗಳನ್ನು ದೊರಕಿಸಿಕೊಡ ಲಾಗುವದು ಜನವರಿ 1, 2019 ರಿಂದ ಮಾರ್ಚ್ 31, 2019 ರ ಅವಧಿಯೊಳಗೆ 1 ಲಕ್ಷ ರೂ. ಒಳಗಿನ ತಮ್ಮ ಸಾಲವನ್ನು ಮರುಪಾವತಿಸಿರುವ ನೇಕಾರರಿಗೂ ಸಹ ಅವರು ಪಾವತಿಸಿರುವ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ಯೋಜನೆಯ ಸೌಲಭ್ಯವನ್ನು ಒದಗಿಸಲಾಗುವುದು.
ಇದಲ್ಲದೆ “ನೇಕಾರರ ಸಮ್ಮಾನ್ ಯೋಜನೆ” ಎಂಬ ಹೊಸ ಯೋಜನೆ ಯಡಿಯಲ್ಲಿ ನಮ್ಮ ರಾಜ್ಯದಲ್ಲಿರುವ ಅಂದಾಜು 54,000 ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2000 ರೂ. ಗಳಂತೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಎಂದರು. ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ ಈಗಾಗಲೇ 11.80 ಲಕ್ಷ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ 2000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ.
ಇನ್ನುಳಿದ 4 ಲಕ್ಷ ಕಟ್ಟಡ ಕಾರ್ಮಿಕರಿಗೆ ಅವರವರ ಬ್ಯಾಂಕ್ ಖಾತೆಯ ವಿವರಗಳು ದೊರೆತ ನಂತರ 2,000 ರೂ.ಗಳನ್ನು ವರ್ಗಾಯಿಸಲು ಕ್ರಮ ಕ್ರಮವಹಿಸ ಲಾಗುವುದು. ಈ ಎಲ್ಲ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ನೀಡಿರುವ 2,000 ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 3,000 ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ಬಿಎಸ್‍ವೈ ವಿವರಿಸಿದರು.