ಮಡಿಕೇರಿ, ಮೇ 6: ಭಾರತ ಲಾಕ್‍ಡೌನ್ ನಡುವೆ ಕೊಡಗಿನಲ್ಲಿ ಸ್ಥಗಿತಗೊಂಡಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳು ಇಂದು ನಿರ್ಬಂಧ ಸಡಿಲಿಕೆ ನಡುವೆ ಜಿಲ್ಲೆಯೊಳಗೆ ಸೀಮಿತ ಮಾರ್ಗಗಳಲ್ಲಿ ಸಂಚಾರ ಆರಂಭಿಸಿವೆ. ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯ ಅವಧಿಯಲ್ಲಿ ಇಲ್ಲಿನ ನಿಲ್ದಾಣದಲ್ಲಿ ಒಂದಿಷ್ಟು ಪ್ರಯಾಣಿಕರು ಕಾಣಿಸಿಕೊಂಡರು.ಆ ಮೇರೆಗೆ ಮಡಿಕೇರಿಯಿಂದ ಮಾದಾಪುರ, ಸೋಮವಾರಪೇಟೆ ಮೂಲಕ (ಮೊದಲ ಪುಟದಿಂದ) ಕೊಡ್ಲಿಪೇಟೆ ತನಕ ಒಂದು ಬಸ್ ಸಂಚರಿಸಿತು. ಸೋಮವಾರ ಪೇಟೆಯಿಂದ ಕುಶಾಲನಗರಕ್ಕೂ ಬಸ್‍ವೊಂದು ತೆರಳಿತು. ಈ ನಡುವೆ ಜಿಲ್ಲಾ ಕೇಂದ್ರದಿಂದ ಕುಶಾಲನಗರ ನಡುವೆ ನಾಲ್ಕು ಬಸ್‍ಗಳು ಸಂಚರಿಸಿದರೆ, ವೀರಾಜಪೇಟೆ ಹಾಗೂ ಸಂಪಾಜೆ ಮಾರ್ಗದಲ್ಲಿ ಒಂದೊಂದು ಬಸ್ ಚಲಿಸಿದವು. ಇನ್ನು ಭಾಗಮಂಡಲ ಮಾರ್ಗವಾಗಿಯೂ ಒಂದು ಬಸ್ ತೆರಳಿತು.

ಯಾವುದೇ ಮಾರ್ಗದಲ್ಲಿ ಅಷ್ಟಾಗಿ ಮೊದಲ ದಿನ ಪ್ರಯಾಣಿಕರು ಕಾಣಿಸಿಕೊಳ್ಳಲಿಲ್ಲ. ಅತ್ಯಲ್ಪ ಹಣ ಸಂಗ್ರಹದೊಂದಿಗೆ ಡಿಸೇಲ್‍ಗೂ ವೆಚ್ಚಕ್ಕೂ ಆದಾಯ ಲಭಿಸಲಿಲ್ಲ. ಜಿಲ್ಲೆಯಲ್ಲಿ ಜನತೆಯ ಬೇಡಿಕೆ ನೋಡಿಕೊಂಡು ಅಪೇಕ್ಷಿತ ಮಾರ್ಗಗಳಲ್ಲಿ ಬಸ್‍ಗಳನ್ನು ಓಡಿಸಲು ಪ್ರಯತ್ನಿಸಲಾಗುವುದು ಎಂದು ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಈಗಿನ ಪರಿಸ್ಥಿತಿಯಲ್ಲಿ ಬಹುತೇಕ ಚಾಲಕರು ಮತ್ತು ನಿರ್ವಾಹಕರು ಬೇರೆ ಬೇರೆ ಕಡೆಗಳಲ್ಲಿ ವಾಸವಿದ್ದು, ಇನ್ನಷ್ಟೇ ಕರ್ತವ್ಯಕ್ಕೆ ಮರಳಬೇಕಿದೆ ಎಂದು ನೆನಪಿಸಿದ ಅವರು, ಕನಿಷ್ಟ ಡೀಸೆಲ್ ಬಳಕೆಗೆ ಪ್ರಯಾಣಿಕರಿಂದ ಹಣ ಸಂಗ್ರಹವಾದರೂ ಆದಾಯ ನಿರೀಕ್ಷಿಸದೆ ಬಸ್ ಓಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮೊದಲ ದಿನ ಎರಡಂಕಿ ದಾಟುವಷ್ಟು ಬಸ್‍ಗಳು ಸಂಚರಿಸಿಲ್ಲ. ಕೇವಲ 10 ಬಸ್‍ಗಳ ಓಡಾಟ ಆರಂಭಗೊಂಡಿದೆ. ಮುಂದೆ ಸುಧಾರಣೆಯೊಂದಿಗೆ ಪ್ರಯಾಣಿಕರು ಜಿಲ್ಲೆಯೊಳಗೆ ಸಂಚರಿಸುವ ಆಶಯ ಹೊಂದಿರುವುದಾಗಿ ಅವರು ನುಡಿದರು.

ಬೆಳಿಗ್ಗೆ ಮತ್ತು ಸಂಜೆ ಕಚೇರಿ ವೇಳೆ ಹೆಚ್ಚಿನ ಬಸ್ ಕಲ್ಪಿಸಲಾಗುವುದು ಎಂದು ಅವರು ವಿವರಿಸಿದರು.