ಮಡಿಕೇರಿ ಮೇ 4: ರಾಜ್ಯ ಸರಕಾರ ಪ್ರಸಕ್ತ ವರ್ಷ ಸಹಕಾರ ಕ್ಷೇತ್ರದ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಹೊಸ ಸುತ್ತೋಲೆಯಿಂದಾಗಿ ಕೊಡಗಿನಂತಹ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸುಭದ್ರವಾಗಿದ್ದ ಸಹಕಾರಿ ಕ್ಷೇತ್ರ ಬುಡಮೇಲಾಗುವ ಸಾಧ್ಯತೆ ಇದೆ ಎಂದು ಬೊಳ್ಳುಮಾಡು ವಿ.ಎಸ್. ಎಸ್.ಎನ್.ನ ಮಾಜಿ ಅಧ್ಯಕ್ಷರೂ ಆಗಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದ್ದಾರೆ.

ಈ ವಿಚಾರದಲ್ಲಿ ಡಿ.ಸಿ.ಸಿ. ಬ್ಯಾಂಕ್ ರಾಜ್ಯ ಸರಕಾರದ ಹೊಸ ಸುತ್ತೋಲೆ ಇನ್ನೂ ಪರಿಷ್ಕøತಗೊಳ್ಳದ ಹಿನ್ನೆಲೆ ಜಿಲ್ಲೆಯ ಇತರ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸೂಚನೆ ನೀಡಿದೆ. ಸರಕಾರದ ಹೊಸ ನೀತಿಯನ್ನು ಪ್ರಶ್ನಿಸಲಾಗಿದ್ದರೂ ಇದರಲ್ಲಿ ಈತನಕ ಬದಲಾವಣೆ ಮಾಡದಿರುವುದು ಈ ಕ್ಷೇತ್ರದ ಚಟುವಟಿಕೆ ಬಗ್ಗೆ ದುಷ್ಪರಿಣಾಮ ಉಂಟು ಮಾಡಲಿದ್ದು ರೈತರಿಗೆ ಸಮಸ್ಯೆಯಾಗಲಿದೆ ಎಂದಿದ್ದಾರೆ.

ತಾ. 3 ರ ಪತ್ರಿಕೆಯಲ್ಲಿ ಪ್ರಕಟ ಗೊಂಡ ಸುದ್ದಿಗೆ ಪ್ರತಿಕ್ರಿಯಿಸಿರುವ ಮೊಣ್ಣಪ್ಪ ಅವರು ರೈತರಿಗೆ ಅಗತ್ಯ ಸಮಯದಲ್ಲಿ ಸೂಕ್ತ ಸಾಲ ಯೋಜನೆ ಮೂಲಕ ನೆರವು ನೀಡುವುದು ಈ ಹಿಂದಿನ ಉದ್ದೇಶವಾಗಿತ್ತು. ಈ ಸಮಯ ಕೊಡಗಿನ ಬೆಳೆಗಾರರು, ರೈತರಿಗೆ ಅಮೂಲ್ಯವಾಗಿದ್ದು ಹೊಸ ನೀತಿಯಿಂದ ಮೇ ತಿಂಗಳು ಕಳೆದರೂ ಹೊಸ ಸಾಲ ಸಿಗುವುದು ದುಸ್ತರವಾಗಲಿದೆ. ಸಹಕಾರ ಕ್ಷೇತ್ರ ರೈತರಿಗೆ ಪ್ರಯೋಜನವಾಗಬೇಕೇ ಹೊರತು ಹೊರೆಯಾಗಬಾರದು. ಬಿ.ಜೆ.ಪಿ. ಸರಕಾರ ರೈತಪರ ಎನ್ನುತ್ತಿದ್ದರೂ ಈಗಿನ ಮಾರ್ಗಸೂಚಿ ರೈತ ಪರವಾಗಿಲ್ಲ. ಕೇವಲ ಭರವಸೆಗಳು ಮಾತ್ರ ಕಂಡು ಬರುತ್ತಿದೆ. ಹೊಸ ನೀತಿಯಿಂದ ರೈತರು ವಾಣಿಜ್ಯ ಬ್ಯಾಂಕ್‍ಗಳತ್ತ ಆಸಕ್ತಿ ತೋರಿದರೂ ಅಚ್ಚರಿಯಿಲ್ಲ. ಇದರಿಂದಾಗಿ ಹಲವಾರು ವರ್ಷದಿಂದ ಹಿರಿಯರು ಕಟ್ಟಿ ಬೆಳೆಸಿರುವ ಸಹಕಾರ ಕ್ಷೇತ್ರ ಹಿನ್ನಡೆ ಕಾಣಲಿದ್ದು, ಇದರ ವಿರುದ್ಧ ಪ್ರಬಲವಾಗಿ ಪ್ರಶ್ನಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.