ಶ್ರೀಮಂಗಲ, ಮೇ 4: ಕಾನೂರು ಗ್ರಾ.ಪಂ. ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದ ವಾರ್ಡ್ ಸಭೆಯಲ್ಲಿ ಅಂಗೀಕಾರವಾಗದ ಕಾಮಗಾರಿಗಳನ್ನು ಇಂಜಿನಿಯರ್‍ಗಳು ಮಾಡಿದ್ದು, ಇದಲ್ಲದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಲಾಕ್‍ಡೌನ್ ಸಂದರ್ಭ ಬಡವರಿಗೆ ನೀಡಿದ ಪಡಿತರದಲ್ಲಿ ನೈಜ ಫಲಾನುಭವಿಗಳಿಗೆ ದೊರೆತಿಲ್ಲ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಬೆಕ್ಕೆಸೊಡ್ಲೂರು ಗ್ರಾಮದಲ್ಲಿ 14ನೇ ಹಣಕಾಸು ಯೋಜನೆಯ ಅಡಿ ಇಲ್ಲಿನ ಅಂಗನವಾಡಿ ಸಮೀಪ ಅನಗತ್ಯವಾಗಿ ಚರಂಡಿ ಕಾಮಗಾರಿಯನ್ನು ರೂ. 88 ಸಾವಿರ ವಿನಿಯೋಗಿಸಿ ಮಾಡಲಾಗಿದೆ. ಚರಂಡಿಯ ನೀರನ್ನು ಇಲ್ಲಿನ ಪರಿಶಿಷ್ಟ ಪಂಗಡದ ಮನೆಗೆ ಹರಿದು ಹೋಗುವಂತೆ ಬಿಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕಾಮಗಾರಿ ಗುರುತಿಸಿದ ಆರಂಭದಲ್ಲಿಯೇ ಜಿ.ಪಂ. ಎಇಇ ಮಹದೇವ್ ಮತ್ತು ಸೆಕ್ಷನ್ ಇಂಜಿನಿಯರ್ ಪುಟ್ಟಸ್ವಾಮಿಯವರಿಗೆ ಅನಗತ್ಯವಾದ ಕಾಮಗಾರಿಯನ್ನು ಮಾಡದಂತೆ ದೂರು ನೀಡಿದ್ದೇವೆ. ಗ್ರಾಮಸ್ಥರ ದೂರನ್ನು ಪರಿಗಣಿಸದೆ ಕಾಮಗಾರಿ ಮಾಡಿದ್ದು ನಂತರ ಬಿಲ್ ಪಾವತಿಸದಂತೆ ಗ್ರಾ.ಪಂ. ಪಿಡಿಓ ಅವರಿಗೆ ದೂರು ನೀಡಲಾಗಿತ್ತು. ಆದರೂ ಬಿಲ್ ಪಾವತಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆ ಉದ್ಘಾmನೆಗೆ ಶಾಸಕ ಕೆ.ಜಿ. ಬೋಪಯ್ಯ ಬಂದಿದ್ದ ಸಂದರ್ಭ ಆ ಕಾಲೋನಿಗೆ ಚರಂಡಿ ಮಾಡಲು ಸೂಚಿಸಿದ್ದರು. ಆದರೆ ಶಾಸಕರ ಸೂಚನೆಯನ್ನು ನಿರ್ಲಕ್ಷಿಸಿ ಅಗತ್ಯ ಇಲ್ಲದ ಕಡೆಗೆ ಚರಂಡಿ ಕಾಮಗಾರಿ ಮಾಡಿ ಸಾರ್ವಜನಿಕ ಹಣ ಪೋಲು ಮಾಡಲಾಗಿದೆ ಎಂದು ದೂರಿದರು.

2018ರಲ್ಲಿ ಅತಿವೃಷ್ಟಿಯಿಂದ ಬೆಕ್ಕೆಸೊಡ್ಲೂರು ಗ್ರಾಮದ ತೀತಮಾಡ ಕುಟುಂಬಸ್ಥರ 8 ಕುಟುಂಬ ಕುಡಿಯುವ ನೀರು ತೆಗೆಯುತ್ತಿದ್ದ ತೆರೆದ ಬಾವಿ ಭೂಕುಸಿತದಿಂದ ಸಂಪೂರ್ಣ ಮುಚ್ಚಿಹೋಗಿದೆ. ಕಾನೂರು ಗ್ರಾ.ಪಂ. ಪಿಡಿಓ, ಗ್ರಾ.ಪಂ. ಸದಸ್ಯರು, ಬಾಳೆಲೆ ಕ್ಷೇತ್ರದ ಜಿ.ಪಂ. ಸದಸ್ಯರು ಖುದ್ದಾಗಿ ನೋಡಿದ್ದು ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಇದುವರೆಗೆ ಈ ಬಾವಿಯನ್ನು ದುರಸ್ತಿ ಪಡಿಸಿಲ್ಲ, ಇದರಿಂದ ಕುಡಿಯುವ ನೀರಿಗಾಗಿ ಈ ಕುಟುಂಬಸ್ಥರು ಕೀರಾ ಹೊಳೆಗೆ ಅರ್ಧ ಕಿ.ಮೀ. ನಷ್ಟು ದೂರ ತೆರಳಿ ತರುತ್ತಿದ್ದಾರೆ ಎಂದು ಗ್ರಾಮಸ್ಥರು ಸಂಕಷ್ಟವನ್ನು ತೆರೆದಿಟ್ಟರು. ಇದೇ ಗ್ರಾಮಕ್ಕೆ ತೆರೆದ ಬಾವಿಯನ್ನು ಜಿ.ಪಂ.ಯಿಂದ ಮಂಜೂರು ಮಾಡಲಾಗಿದ್ದು, ಈಗಾಗಲೇ ಜಿಲ್ಲಾ ಪಂಚಾಯ್ತಿಯಿಂದಲೆ ತೆರೆದ ಬಾವಿಯನ್ನು ಹೊಂದಿರುವ ಕುಟುಂಬ ಒಂದರ ಲೈನ್ ಮನೆಗೆ ಹೊಸಬಾವಿಯನ್ನು ತೋಡಲು ಈಗಾಗಲೇ ಜಾಗ ಗುರುತಿಸಿ ಕಾವiಗಾರಿ ಆರಂಭಿಸುವ ಹಂತದಲ್ಲಿದೆ. ಅನಗತ್ಯವಾಗಿ ಸರ್ಕಾರದ ಸೌಲಭ್ಯವನ್ನು ಉಳ್ಳವರಿಗೆ ನೀಡುವ ಬದಲು ಈಗಾಗಲೇ ಅತಿವೃಷ್ಟಿಯಿಂದ ಮುಚ್ಚಿಹೋಗಿರುವ ಬಾವಿಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತೀತಮಾಡ ಕುಟುಂಬಸ್ಥರ ಜಾಗದಲ್ಲಿ ನಿರ್ಮಿಸುವಂತೆ ಒತ್ತಾಯಿಸಿದರು.

ಕಾನೂರು ಗ್ರಾ.ಪಂ. ವ್ಯಾಪ್ತಿಗೆ ಬಂದ ಪಡಿತರ ಕಿಟ್‍ಗಳಲ್ಲಿ ಬೆಕ್ಕೆಸೊಡ್ಲೂರು ಗ್ರಾಮಕ್ಕೆ ಯಾವುದೇ ಕಿಟ್ ವಿತರಿಸಿಲ್ಲ ಇಲ್ಲಿ ಪರಿಶಿಷ್ಟ ಕುಟುಂಬಸ್ಥರು ಇದ್ದು, ಬಡತನದಲ್ಲಿರುವ ಕುಟುಂಬಸ್ಥರು ಪಡಿತರ ಚೀಟಿ ಇಲ್ಲದವರು ಸಹ ಇದ್ದಾರೆ. ಆದರೆ ಗ್ರಾ.ಪಂ. ಪಿಡಿಓ ಅವರು ನೈಜ ಫಲಾನುಭವಿಗಳ ಪಟ್ಟಿ ತಯಾರಿಸದೆ ತಮಗೆ ಬೇಕಾದವರಿಗೆÀ ಪಡಿತರ ಕಿಟ್ಟನ್ನು ವಿತರಿಸಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಸಿ.ಇ.ಒ ಅವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.