ಮಡಿಕೇರಿ, ಮೇ 5: ಕೊರೊನಾ ತಂದ ಆತಂಕದಿಂದಾಗಿ ದಿಢೀರ್ ಲಾಕ್‍ಡೌನ್‍ನಿಂದ ಹೆಚ್ಚು ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಎಲ್ಲಾ ವಹಿವಾಟುಗಳ ನಿರ್ಬಂಧದಂತೆ ಇದರಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದ ಮದ್ಯದ ವ್ಯಾಪಾರವೂ ಸೇರಿತ್ತು. ಮಾರ್ಚ್ 21 ರಂದು ಜಿಲ್ಲೆಯಲ್ಲಿ ಇತರೆಡೆಗಳಂತೆ ಮದ್ಯವಹಿವಾಟಿಗೆ ಬೀಗ ಮುದ್ರೆ ಜಡಿಯಲ್ಪಟ್ಟಿತ್ತು. ಇದು ಒಂದೆರಡು ದಿನ, ವಾರದಲ್ಲಿ ತೆರೆಯಲ್ಪಡುತ್ತವೆ ಎಂಬ ಮದ್ಯಪ್ರಿಯರ ಕನಸು ನನಸಾಗಲೇ ಇಲ್ಲ. ಬರೋಬ್ಬರಿ 40 ದಿನಗಳ ಕಾಲ ಮದ್ಯಕ್ಕಾಗಿ ಪರಿತಪಿಸಬೇಕಾಯಿತು.

ಈ ಪರಿಸ್ಥಿತಿಯನ್ನು ಬಳಸಿ ಹಲವರು ಭಾರೀ ಲಾಭ ಮಾಡಿಕೊಂಡಿದ್ದಾರೆ. ಕೆಲವರ ಬಳಿ ಇದ್ದ ‘ಸ್ಟಾಕ್’ ದುಬಾರಿ ಬೆಲೆಗೆ ಬಿಕರಿಯಾಗಿದೆ. ಹಲವಾರು ತಡೆಗಳಲ್ಲಿ ಜನತೆ ಬಟ್ಟಿ ಸಾರಾಯಿಯ ಮೊರೆ ಹೊಕ್ಕಿದ್ದಾರೆ. ಬಟ್ಟಿ ಸಾರಾಯಿ ಮಾರಾಟಕ್ಕೆ ಮುಂದಾದವರು ಕುಡಿಯಲು ಅರಸುತ್ತಾ ಹೊರಟವರು ಅಲ್ಲಲ್ಲಿ ಸಿಕ್ಕಿ ಬಿದ್ದು ಕೇಸು ಹಾಕಿಸಿ ಕೊಂಡಿದ್ದಾರೆ. ಅಬಕಾರಿ ಇಲಾಖೆಯ ವರು ಇವರೊಂದಿಗೆ ಪೊಲೀಸರು ಕೂಡ ಈ ವಿಚಾರದಲ್ಲಿ ‘ಭಾರಿಯಿಂದ ಅತಿಭಾರಿ..!’ ಎಂಬಂತಹ ಕಾರ್ಯಾ ಚರಣೆಗಳನ್ನೇ ನಡೆಸಿಬಿಟ್ಟಿದ್ದಾರೆ. ಈ ಸನ್ನಿವೇಶಗಳು ಬಹುಶಃ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ನಡೆದಿವೆ.

ಇವೆಲ್ಲದರ ನಡುವೆ ಅಬಕಾರಿ ಇಲಾಖೆಯ ಮೂಗಿನ ನೇರಕ್ಕೆ ಎಂಬಂತೆ ಹಲವು ಹಿಂಬಾಗಿಲ ಚಟುವಟಿಕೆಗಳು ಕೂಡ ನಡೆದಿರುವದು ವರದಿಯಾಗಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಅಬಕಾರಿ ಇಲಾಖಾ ಕಚೇರಿ ಬಳಿಯೇ ಇರುವ ಬಾರೊಂದರಲ್ಲಿ ಮಾ. 21 ರಂದು ಸೀಲ್ ಆದಾಗ ಇದ್ದ ಸ್ಟಾಕ್ ನಂತರದ ದಿನಗಳಲ್ಲಿ ಮಂಗಮಾಯವಾಗಿದೆ.

ಈ ಬಗ್ಗೆ ಇಲಾಖಾ ಕಾರ್ಯಾ ಚರಣೆ ನಡೆದಿದೆ ಎನ್ನಲಾಗಿದ್ದರೂ ವಿವರ ಬಹಿರಂಗವಾಗಿ ಬೆಳಕಿಗೆ ಬಂದಿಲ್ಲ. ಇದು ‘ಅಬ್‍ನಾರ್ಮಲ್ ಸೇಲ್’ ಎಂದು ಮೊಕದ್ದಮೆ ದಾಖಲಾಗಿದ್ದು, ಇದರ ಮುಂದಿನ ಕ್ರಮದ ಬಗ್ಗೆ ಖಚಿತಗೊಂಡಿಲ್ಲ. ಈ ಬಗ್ಗೆ ಇಲಾಖೆ ವಿವರ ಒದಗಿಸಲು ಜಾಣ ಮರೆವು ರೀತಿ ವರ್ತಿಸುತ್ತಿದೆ. ಇದರಂತೆ ಆಲೂರು ಸಿದ್ದಾಪುರ, ಕುಶಾಲನಗರ, ನೆಲ್ಯಹುದಿಕೇರಿ ಸೇರಿ ಕೆಲವೊಂದು ಮದ್ಯದಂಗಡಿಗಳಲ್ಲಿ ‘ಸ್ಟಾಕ್’ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದು, ಇಂತಹ ಪ್ರಕರಣಗಳು ವಿಚಾರಣೆಯಲ್ಲಿವೆ.

ಸಂಬಂಧಿಸಿದವರು ಇದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕಿದೆ ಬಳಿಕವಷ್ಟೆ ಕ್ರಮದ ಕುರಿತು ನಿರ್ಧಾರ ವಾಗಲಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. ಮತ್ತೊಂದು ಸೋಜಿಗವೆಂದರೆ ಮದ್ಯ ವ್ಯಾಪಾರಕ್ಕೆ ಕಾಯುತ್ತಿದ್ದ ಪರಿಸ್ಥಿತಿಯ ನಡುವೆ ಅನುಮತಿ ಸಿಕ್ಕರೂ ಮಾದಾಪುರ ಸೇರಿ ಒಂದೆರಡು ಅಂಗಡಿಗಳಿಗೆ ನಿನ್ನೆ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಏಕೆಂದರೆ ಸ್ಟಾಕ್ ಇಲ್ಲವಂತೆ (!) ಮತ್ತೊಂದು ಮೂಲದಂತೆ ಈ ಮದ್ಯದಂಗಡಿಯ ವೆಂಡಾರ್ ಇಲ್ಲದ ಕಾರಣ ನಿನ್ನೆ ತೆರೆಯಲು ಕೀಲಿ ಕೈ ಸಿಗದೆ ಸಮಸ್ಯೆಯಾಗಿದೆಯಂತೆ!! ಇಂತಹ ಕೆಲವಾರು ‘ಅಚ್ಚರಿ’ಗಳು ಜಿಲ್ಲೆಯಲ್ಲಿ ತೆರೆಮರೆಯಲ್ಲಿ ಜರುಗಿವೆ. ಆದರೆ ಬಟ್ಟಿ ಸಾರಾಯಿಗೆ ಕೈ ಹಾಕಿದವರು, ಕುಡಿಯಲು ಧಾವಿಸಿದವರು ಮಾತ್ರ ತುಸು ಹೆಚ್ಚು ‘ಬರೆ’ ಹಾಕಿಸಿಕೊಂಡಿದ್ದಾರೆ.

ಲಾಕ್‍ಡೌನ್ ಸಂದರ್ಭದ ಜಿಲ್ಲೆಯ ಸಮಗ್ರ ಚಿತ್ರಣವನ್ನು ಅಬಕಾರಿ ಇಲಾಖೆ ಪ್ರಕಟಿಸಬೇಕೆಂದು ಹಲವರು ಒತ್ತಾಯಿಸಿದ್ದಾರೆ.