ಕಳೆದ ಒಂದೂವರೆ ತಿಂಗಳಿನಿಂದ ಮದ್ಯಮಾರಾಟ ಮಳಿಗೆಗಳು ಬಂದ್ ಆಗಿದ್ದು, ನಿನ್ನೆಯಷ್ಟೇ ಬಾಗಿಲು ತೆರೆದಿವೆ. ಕಳೆದ 45 ದಿನಗಳಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದರಿಂದ ಪೊಲೀಸರು ಕೊರೊನಾ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಕ್ಕಂತಾಗಿತ್ತು.

ಈ ನಡುವೆ ನಿನ್ನೆ ಮರಳಿ ಮದ್ಯದಂಗಡಿಗಳು ತೆರೆಯಲ್ಪಟ್ಟಿದ್ದರಿಂದ ಇದಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈಗಲೂ ಮುಂದುವರೆದಿದೆ. ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂಬ ಆಗ್ರಹಗಳೂ ಕೇಳಿಬರುತ್ತಿವೆ. ಈ ಮಧ್ಯೆ ಮದ್ಯದಂಗಡಿ ತೆರೆದರೆ ಅಪರಾಧ ಪ್ರಕರಣಗಳು ಹೆಚ್ಚುವ ಸಂಶಯವನ್ನು ಸ್ವತಃ ಪೊಲೀಸ್ ಸಿಬ್ಬಂದಿಗಳೂ ವ್ಯಕ್ತಪಡಿಸಿದ್ದರು.

ಆದರೆ ನಿನ್ನೆ ಹಾಗೂ ಇಂದು ಮದ್ಯಪ್ರಿಯರಿಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವದೇ ಅಪರಾಧ ಕೃತ್ಯಗಳು ನಡೆದಿಲ್ಲ. ಸೋಮವಾರಪೇಟೆ ಮತ್ತು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಂಎಸ್‍ಐಎಲ್ ಹಾಗೂ ಎಂಆರ್‍ಪಿ ಮದ್ಯದಂಗಡಿಯಲ್ಲಿ ನಿನ್ನೆ ಭಾರೀ ಪ್ರಮಾಣದ ವ್ಯಾಪಾರ ವಹಿವಾಟು ನಡೆದಿದ್ದು, ಇಂದು ಮದ್ಯಕ್ಕಾಗಿ ಯಾರೂ ಮುಗಿಬೀಳಲಿಲ್ಲ. ಇದರೊಂದಿಗೆ ಎರಡೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಡಿದು ಗಲಾಟೆ ನಡೆದಿರುವ ಕೃತ್ಯಗಳು ವರದಿಯಾಗಿಲ್ಲ.

ಈ ಹಿಂದೆ ಠಾಣೆಯ ಮೆಟ್ಟಿಲೇರುತ್ತಿದ್ದ ಬಹುತೇಕ ಪ್ರಕರಣಗಳಲ್ಲಿ, ಮದ್ಯಪಾನದಿಂದಾದ ಅಪರಾಧಗಳೇ ಅಧಿಕವಾಗಿರುತ್ತಿದ್ದವು. ಆದರೆ ಕಳೆದ ಒಂದೂವರೆ ತಿಂಗಳ ನಂತರ ಮತ್ತೆ ಮದ್ಯದಂಗಡಿ ತೆರೆದರೂ ಸಹ ಯಾವದೇ ಅಪರಾಧ ಕೃತ್ಯಗಳು ಸೋಮವಾರಪೇಟೆ-ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿಲ್ಲ. ಇದು ಸ್ವತಃ ಪೊಲೀಸ್ ಸಿಬ್ಬಂದಿಗಳಿಗೆ ಆಶ್ಚರ್ಯ ತರಿಸಿದೆ. ಈ ಮಧ್ಯೆ ಕುಡಿದು ಪಟ್ಟಣದಲ್ಲಿ ತೂರಾಡುವವರ ಸಂಖ್ಯೆ ಏರಿಕೆಯ ಹಾದಿಯಲ್ಲಿದೆ!