ನಾಪೋಕ್ಲು, ಮೇ 5: ಕೊಳಕೇರಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು ನಷ್ಟ ಉಂಟಾಗಿದೆ. ಗ್ರಾಮದಲ್ಲಿನ ಕಾಫಿ ಬೆಳೆಗಾರ ಕನ್ನಂಬೀರ ಸುಧಿ ಹಾಗೂ ಸುತ್ತಮುತ್ತಲ ಕೃಷಿಕರ ಕೃಷಿ ಭೂಮಿಯಲ್ಲಿ ಕಾಡಾನೆಗಳ ಹಿಂಡು ಓಡಾಡಿ ಧ್ವಂಸಗೊಳಿಸಿದೆ.

ಕನ್ನಂಬೀರ ಸುಧಿ ಅವರ ಶುಂಠಿಯ ಮಡಿಗಳು ಹಾನಿಗೊಳಗಾಗಿವೆ. ನೀರು ಹಾಯಿಸಲು ಅಳವಡಿಸಿದ್ದ ಸ್ಪ್ರಿಂಕ್ಲರ್ ಪೈಪ್‍ಗಳು ಧ್ವಂಸವಾಗಿ ಬಾಳೆ, ಶುಂಠಿ, ಮತ್ತಿತರ ಬೆಳೆಗಳು ಹಾನಿಗೊಳಗಾಗಿವೆ. ಮೂರು ಕಾಡಾನೆಗಳ ಹಿಂಡು ಈ ವ್ಯಾಪ್ತಿಯಲ್ಲಿ ಸಂಚರಿಸಿದ್ದು ಅವುಗಳನ್ನು ಓಡಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.