ಕುಶಾಲನಗರ, ಮೇ 5: ಲಾಕ್ಡೌನ್ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಬಹುತೇಕ ಕಟ್ಟಡ ಮಾಲೀಕರು ತಮ್ಮ ಬಾಡಿಗೆದಾರರಿಂದ ಮಾಸಿಕ ಬಾಡಿಗೆ ತೆಗೆದುಕೊಳ್ಳದೆ ಮಾನವೀಯತೆ ಮೆರೆದ ಹಲವು ಪ್ರಕರಣಗಳು ಕಂಡುಬಂದಿವೆ. ಲಕ್ಷಗಟ್ಟಲೆ ರೂಗಳ ಮುಂಗಡ ಪಾವತಿಸಿ ಮಾಸಿಕ ಸಾವಿರಾರು ರೂ.ಗಳ ಬಾಡಿಗೆ ನೀಡುವ ಮೂಲಕ ಕುಶಾಲನಗರದ ಬಹುತೇಕ ವ್ಯಾಪಾರಿಗಳು ಕಳೆದ ಹಲವು ವರ್ಷಗಳಿಂದ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಏಕಾಏಕಿ ಲಾಕ್ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳುವುದರೊಂದಿಗೆ ಅಂಗಡಿಯಲ್ಲಿ ಸರಕುಗಳ ದಾಸ್ತಾನುಗಳನ್ನು ಗ್ರಾಹಕರಿಗೆ ನೀಡಲಾಗದೆ ನಷ್ಟದಲ್ಲಿ ಇರುವುದನ್ನು ಗಮನಿಸಿದ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ರಾಧಾಕೃಷ್ಣ ಮೆಡಿಕಲ್ ಮಾಲೀಕ ಎಸ್.ಎಲ್.ಶ್ರೀಪತಿ ಅವರು ತಮ್ಮ ಸುಮಾರು 40 ಕ್ಕೂ ಅಧಿಕ ಮಳಿಗೆಗಳ ಬಾಡಿಗೆ ಮನ್ನಾ ಮಾಡಿರುವುದಾಗಿ ತಿಳಿಸಿದ್ದು ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಪೂರ್ಣ ತಿಂಗಳ ಅಂದಾಜು ಒಟ್ಟು 4 ಲಕ್ಷಕ್ಕೂ ಅಧಿಕ ಮೊತ್ತದ ಬಾಡಿಗೆಯನ್ನು ಬಿಟ್ಟುಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಕೂಡ ಹಲವು ಕಟ್ಟಡ ಮಾಲೀಕರು ಇದೇ ರೀತಿಯ ಮಾನವೀಯತೆ ಮೆರೆದಿದ್ದು ಕಾವೇರಿ ನಿಸರ್ಗಧಾಮ, ಬಳಿಯ ವಾಣಿಜ್ಯ ಉದ್ಯಮಿ ಎನ್ಟಿಸಿ ಮಾಲೀಕ ಸಲಾಂ ತಮ್ಮ 75 ಕ್ಕೂ ಅಧಿಕ ಮಳಿಗೆದಾರರಿಗೆ ಲಕ್ಷಾಂತರ ರೂಗಳ ಬಾಡಿಗೆ ಮನ್ನಾ ಜೊತೆಗೆ ಕೆಲವು ಉದ್ಯೋಗಿಗಳಿಗೆ ಸಹಾಯಧನ ನೀಡಿದ್ದಾರೆ.
ಕುಶಾಲನಗರ ಮತ್ತು ಸುತ್ತಮುತ್ತ ಅನೇಕ ವಾಣಿಜ್ಯ ಮಳಿಗೆಗಳ ಹಾಗೂ ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿರುವ ಬಗ್ಗೆ ಶಕ್ತಿಗೆ ಬಾಡಿಗೆದಾರರಿಂದ ಮಾಹಿತಿ ದೊರಕಿದೆ.
-ಸಿಂಚು