ವೀರಾಜಪೇಟೆ, ಮೇ 4: 42 ದಿನಗಳ ನಂತರ ಮದ್ಯ ಮಾರಾಟವನ್ನು ರಾಜ್ಯ ಸರಕಾರ ಪುನ:ರಾರಂಭಿಸಿದರೆ ಮದ್ಯದಲ್ಲಿ ಭಾರೀ ವ್ಯವಹಾರ ಕುದುರಿಸಬಹುದೆಂಬ ಮದ್ಯದ ವ್ಯಾಪಾರಿಗಳ ನಿರೀಕ್ಷೆ ಇಂದು ಹುಸಿಯಾಯಿತು.ಸರಕಾರದ ಆದೇಶದಂತೆ ಇಲ್ಲಿನ ಮದ್ಯ ವ್ಯಾಪಾರಿಗಳು ಇಂದು ಬೆಳಿಗ್ಗೆ ಮದ್ಯದ ಅಂಗಡಿಗಳನ್ನು ತೆರೆದಿದ್ದರೂ ಆರಂಭದಲ್ಲಿ ಎಲ್ಲ ಮದ್ಯದ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾಧಾರಣ ಸರದಿ ಇತ್ತು. ನಂತರ 11ಗಂಟೆ ವೇಳೆಗೆ ಸರದಿ ಇಲ್ಲದೆ ಒಬ್ಬೊಬ್ಬರಾಗಿ ಮದ್ಯ ಖರೀದಿಸುತ್ತಿದ್ದರು. ವೀರಾಜಪೇಟೆ ಪಟ್ಟಣದಲ್ಲಿ ಚಿಲ್ಲರೆ ಮಾರಾಟದ ಹನ್ನೆರಡು ಮದ್ಯದ ಅಂಗಡಿಗಳಿದ್ದು ಇಂದು ಯಾವ ಅಂಗಡಿಗಳಲ್ಲೂ ಮದ್ಯ ಖರೀದಿಸಲು ಜನ ಜಂಗುಳಿ ಕಂಡು ಬರಲಿಲ್ಲ. ಎಲ್ಲ ಅಂಗಡಿಗಳ ಮುಂದೆ ಪ್ರತಿ ಸಾರಿಗೆ ಮದ್ಯ ಖರೀದಿಸಲು 5 ಮಂದಿಗೆ ಅವಕಾಶ ನೀಡಲಾಗಿತ್ತು.ಸಾಮಾಜಿಕ ಅಂತರ ಕಾಯ್ದುಕೊಂಡು ಅವಕಾಶ ನೀಡಲಾಗಿತ್ತು. ಹೊರ ರಾಜ್ಯ, (ಮೊದಲ ಪುಟದಿಂದ)ಜಿಲ್ಲೆಯ ಕೂಲಿ ಕಾರ್ಮಿಕರು ತವರಿಗೆ ತೆರಳಿರುವುದು, ಇಲ್ಲಿನ ಕೂಲಿ ಕಾರ್ಮಿಕರುಗಳು ಕೂಲಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವುದು ಮದ್ಯ ವ್ಯಾಪಾರ ಕುಂಠಿತಕ್ಕೆ ಕಾರಣವಾಯಿತು.

ಅಬಕಾರಿ ಇಲಾಖೆಯ ವೀರಾಜಪೇಟೆ ವಲಯದ ನಿರೀಕ್ಷಕರು, ಸಿಬ್ಬಂದಿಗಳು ಹೊರಗಿನಿಂದಲೇ ಎಲ್ಲ ಮದ್ಯದಂಗಡಿಗಳ ತಪಾಸಣೆಯ ಉಸ್ತುವಾರಿಯಲ್ಲಿದ್ದರು. ಅಪರಾಹ್ನ 4ಗಂಟೆಯ ವೇಳೆಗೆ ಪೊಲೀಸರು ಎಲ್ಲ ಮದ್ಯದಂಗಡಿಗಳನ್ನು ಮುಚ್ಚಿಸಿದರು. -ಡಿ.ಎಂ.ಆರ್.