ಮಡಿಕೇರಿ, ಮೇ 4: ಸರಿ ಸುಮಾರು ಒಂದೂವರೆ ತಿಂಗಳಿನಿಂದ ಕೊರೊನಾ ನಡುವೆ ‘ಭಾರತ ಲಾಕ್‍ಡೌನ್’ನಿಂದ ಮದ್ಯ ಲಭಿಸದೆ ಪರಿತಪಿಸುತ್ತಿದ್ದ ಮಂದಿ ಇಂದು ‘ವಿಶ್ವ ಪಾನಪ್ರಿಯರ ದಿನ’ ಎಂಬಂತೆ ಸಂಭ್ರಮಿಸುವ ಮೂಲಕ ಹಲವೆಡೆ ಗಂಡು - ಹೆಣ್ಣಿನ ಬೇಧವಿಲ್ಲದೆ ಬೆಳ್ಳಂಬೆಳಿಗ್ಗೆ ಮದ್ಯದಂಗಡಿಗಳತ್ತ ಒಡೋಡಿ ಬಂದು ಸರದಿಯನ್ನು ಕಾಯ್ದುಕೊಂಡು ತಮಗೆ ಬೇಕಾದಷ್ಟು ಪ್ರಮಾಣದಲ್ಲಿ ಮದ್ಯ ಖರೀದಿಸಿದರು. ಕೆಲವರು ಮದ್ಯದಂಗಡಿ ತೆಗೆದಿದ್ದು ದೇವರ ದಯೆ ಎಂದು ಉದ್ಗರಿಸಿದರೆ ಇನ್ನು ಕೆಲವರು ಮತ್ತೆ ಮತ್ತೆ ಮದ್ಯ ಬಾಟಲಿಗೆ ಚುಂಬಿಸುತ್ತಾ, ಆ ದೇವರಿಗೆÉ ಒಂದು ಸಲಾಂ... ಎಂದು ಮುನ್ನಡೆಯುತ್ತಿದ್ದ ದೃಶ್ಯ ಎದುರಾಯಿತು! ತಮ್ಮ ತಮ್ಮ ಮದ್ಯ ಮಾರಾಟದ ಮಾಮೂಲಿ ಅಂಗಡಿಗಳ ಬಾಗಿಲುಗಳು ತೆರೆದಿದ್ದು ಕಣ್ಣಿಗೆ ಗೋಚರಿಸುತ್ತಿದ್ದಂತೆ, ಹೊಸ ಹುಮ್ಮಸ್ಸಿನಿಂದ ಪುರುಷರೊಂದಿಗೆ ಹಲವೆಡೆ ಮಹಿಳೆಯರೂ ದಾಪುಗಾಲಿಟ್ಟರೆ, ಕೆಲವರು ಮಾದ್ಯಮ ಮಂದಿಯ ಕಂಡು ನಾಚಿಕೆಯಿಂದ ಮುಖ ತಿರುಗಿಸಿಕೊಂಡು ಹೆಜ್ಜೆ ಹಾಕುತ್ತಾ, ಮದ್ಯದಂಗಡಿಯೊಳಗೆ ನುಸುಳಿ ಅದೇ ವೇಗದಲ್ಲಿ ಹಿಂತೆರಳಿದ ಸಂದರ್ಭ ಎದುರಾಯಿತು. 86 ಮಳಿಗೆಗಳು: ಇಂದು ಕೊಡಗು ಜಿಲ್ಲೆಯಾದ್ಯಂತ 86 ಮದ್ಯದಂಗಡಿಗಳು (ಸಿಎಲ್ -2) ಬಾಗಿಲು ತೆರೆದುಕೊಂಡಿದ್ದವು. ಈ ಹೊರತಾಗಿ ಕುಶಾಲನಗರದ ಸುಂದರ ನಗರ ಹಾಗೂ ಆಲೂರು ಸಿದ್ದಾಪುರದ ಒಂದೊಂದು ಮಳಿಗೆ, ಲಾಕ್‍ಡೌನ್ ಉಲ್ಲಂಘಿಸಿ ಅಕ್ರಮ ದಂಧೆ ನಡೆಸಿದ್ದಕ್ಕಾಗಿ ಅಬಕಾರಿ ಇಲಾಖೆಯಿಂದ ಬೀಗ ಜಡಿಯಲ್ಪಟ್ಟಿತ್ತು. ಮಾತ್ರವಲ್ಲದೆ, ಕುಶಾಲನಗರ ಹಾಗೂ ವೀರಾಜಪೇಟೆಯಲ್ಲಿರುವ ಕೆಎಸ್‍ಬಿಸಿಎಲ್‍ನ 2 ಘಟಕಗಳು ತೆಗೆದಿದ್ದರೂ, ಇಂದು ಸಗಟು ವ್ಯಾಪಾರ ನಡೆದಿಲ್ಲ, ಬದಲಾಗಿ ಎಂಎಸ್‍ಐಎಲ್‍ನ 9 ಶಾಖೆಗಳು ವಹಿವಾಟು ನಡೆಸಿದವು. ಇನ್ನೊಂದೆಡೆ ಮಡಿಕೇರಿಯ ರಾಜಾಸೀಟ್ ಬಳಿ ಹಾಗೂ ಕುಶಾಲನಗರದಲ್ಲಿ ಒಂದು ಸೇರಿದಂತೆ ಎರಡು ಬಾರ್‍ಗಳು ಅಕ್ರಮದ ದಂಧೆಗಾಗಿ ಕಾನೂನು ಕ್ರಮ ಎದುರಿಸುವಂತಾಗಿದೆ ಎಂದು ಗೊತ್ತಾಗಿದೆ. ಮಾಸಿಕ ವಹಿವಾಟು : ಒಂದು ಅಂದಾಜಿನಂತೆ ಕೊಡಗಿನಲ್ಲಿ ಮದ್ಯ ಮಾರಾಟದಿಂದ ಮಾಸಿಕ ಸರಾಸರಿ ರೂ. 35 ಕೋಟಿ ವಹಿವಾಟು ನಡೆಯುತ್ತಿದೆ ಅಲ್ಲದೆ ವಿವಿಧ ಸಂದರ್ಭಗಳಲ್ಲಿ ಕೊಡಗಿನ ಹಬ್ಬ ಹರಿದಿನಗಳಲ್ಲಿ ಈ ಮೊತ್ತ ರೂ. 45 ರಿಂದ 50 ಕೋಟಿ ತನಕ ವಹಿವಾಟು ನಡೆದಿರುವದಾಗಿ ಅಧಿಕೃತ ಮೂಲಗಳಿಂದ ಗೊತ್ತಾಗಿದೆ. ವಿವಿಧ ನಮೂನೆಯ ಮದ್ಯ ಹಾಗೂ ಬಿಯರ್ ಸೇರಿದಂತೆ ತಿಂಗಳೊಂದಕ್ಕೆ 1.25 ಲಕ್ಷ ಪೆಟ್ಟಿಗೆಗಳ ಮಾರಾಟ ನಡೆಯುತ್ತಿರುವ ಮಾಹಿತಿ ‘ಶಕ್ತಿ’ಗೆ ಲಭಿಸಿದೆ.