ಸೋಮವಾರಪೇಟೆ,ಮೇ 4: ಲಾಕ್‍ಡೌನ್‍ನಲ್ಲಿ ಹೆಚ್ಚಿನ ಸಡಿಲಿಕೆ ಇದ್ದ ಸೋಮವಾರದಂದು ಸೋಮವಾರಪೇಟೆ ಪಟ್ಟಣದಲ್ಲಿ ಭಾರೀ ಪ್ರಮಾಣದ ಜನಜಂಗುಳಿ, ವಾಹನಗಳ ಓಡಾಟ ಕಂಡುಬಂತು. ಒಂದೂವರೆ ತಿಂಗಳ ನಂತರ ತೆರೆಯಲ್ಪಟ್ಟ ಮದ್ಯದಂಗಡಿಗಳ ಎದುರು ಮದ್ಯಪ್ರಿಯರು ಶಿಸ್ತಿನ ಸಿಪಾಯಿಗಳಂತೆ ನಿಂತು ಮದ್ಯ ಖರೀದಿಸಿದರೆ, ತರಕಾರಿ-ದಿನಸಿ ಮಾರಾಟಗೊಳ್ಳುತ್ತಿದ್ದ ಆರ್‍ಎಂಸಿ ಪ್ರಾಂಗಣದಲ್ಲಿ ಸಾಮಾಜಿಕ ಅಂತರ ಕಂಡುಬರಲಿಲ್ಲ.ಪಟ್ಟಣದಲ್ಲಿ ಸಾವಿರಾರು ವಾಹನ: ಮಾಮೂಲಿ ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಸಾವಿರಾರು ವಾಹನಗಳ ಓಡಾಟ ಕಂಡುಬಂತು. ಬೆಳಿಗ್ಗೆ 8 ಗಂಟೆಯಿಂದಲೇ ಪಟ್ಟಣದ ರಸ್ತೆಗಳು ವಾಹನಗಳಿಂದ ಭರ್ತಿಯಾಗಿದ್ದವು. ಗ್ರಾಮೀಣ ಭಾಗದಿಂದ ಆಗಮಿಸಿದ
(ಮೊದಲ ಪುಟದಿಂದ)ವಾಹನಗಳಿಗೆ ಪಟ್ಟಣದಲ್ಲಿ ನಿಲುಗಡೆಗೆ ಸ್ಥಳಾವಕಾಶವೂ ಇರಲಿಲ್ಲ. ಪಟ್ಟಣದ ಕ್ಲಬ್‍ರಸ್ತೆ, ಮಡಿಕೇರಿ ರಸ್ತೆ, ತ್ಯಾಗರಾಜ ರಸ್ತೆ, ಮುಖ್ಯರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೂ ಸಂಚಾರ ಅವ್ಯವಸ್ಥೆ ಮುಂದುವರೆಯಿತು.
ಸಾವಿರಾರು ವಾಹನಗಳು ಪಟ್ಟಣಕ್ಕೆ ಆಗಮಿಸಿದ್ದರಿಂದ ಆಗಾಗ್ಗೆ ಟ್ರಾಫಿಕ್ ಜಾಮ್ ಉಂಟಾಯಿತು. ಇದರೊಂದಿಗೆ ಆಟೋಗಳ ಸಂಚಾರಕ್ಕೂ ಅವಕಾಶ ನೀಡಿದ್ದರಿಂದ ಸೋಮವಾರಪೇಟೆ ಪಟ್ಟಣ ಗಿಜಿಗುಡುತ್ತಿತ್ತು.
ಮದ್ಯದಂಗಡಿ ಎದುರು ಸಾಲು: ಒಂದೂವರೆ ತಿಂಗಳ ನಂತರ ತೆರೆಯಲ್ಪಟ್ಟ ಮದ್ಯದಂಗಡಿಗಳ ಎದುರು ಬೆಳಿಗ್ಗೆ 7 ಗಂಟೆಯಿಂದಲೇ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತಿದ್ದರು. ಎಂ.ಆರ್.ಪಿ. ಮತ್ತು ಎಂಎಸ್‍ಐಎಲ್ ಮದ್ಯದಂಗಡಿಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವ್ಯಾಪಾರ ನಡೆಯಿತು.
ಮದ್ಯದಂಗಡಿಗಳ ಎದುರು ಅಬಕಾರಿ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಪ.ಪಂ. ವತಿಯಿಂದ ಸಾಮಾಜಿಕ ಅಂತರಕ್ಕಾಗಿ ಮಾರ್ಕಿಂಗ್ ಮಾಡಲಾಗಿತ್ತು. ಇದರೊಂದಿಗೆ ಅಂಗಡಿಗಳ ಎದುರು ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ಸಾಮಾಜಿಕ ಅಂತರದೊಂದಿಗೆ ಮದ್ಯ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.
ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಮದ್ಯದಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ನಿಂತಿದ್ದ ಮದ್ಯಪ್ರಿಯರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಮಾಸ್ಕ್ ಇಲ್ಲದ ಮಂದಿ ಕರವಸ್ತ್ರವನ್ನೇ ಮುಖಕ್ಕೆ ಕಟ್ಟಿಕೊಂಡು ಮದ್ಯ ಖರೀದಿಸಿದರು. ಇದೇ ಪ್ರಥಮ ಬಾರಿಗೆ ಮದ್ಯದಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದರಿಂದ ಹಲವಷ್ಟು ಮಂದಿ ಮುಜುಗರದಿಂದ ತಲೆಗೆ ಹೆಲ್ಮೆಟ್ ಧರಿಸಿ ಮದ್ಯ ಖರೀದಿಸುತ್ತಿದ್ದುದು ಕಂಡುಬಂತು. ಮಧ್ಯಾಹ್ನದ ವೇಳೆಗೆ ಮದ್ಯದಂಗಡಿಗಳಲ್ಲಿದ್ದ ಶೇ. 60ರಷ್ಟು ಮದ್ಯಗಳು ಖಾಲಿಯಾದವು. ದುಬಾರಿ ಬೆಲೆಯ ಮದ್ಯಗಳಿಗಿಂತ, ಕಡಿಮೆ ಮತ್ತು ಮಧ್ಯಮ ಬೆಲೆಯ ಮದ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು.
ಸೋಮವಾರಪೇಟೆ: ಲಾಕ್‍ಡೌನ್ ಘೋಷಣೆಯಾದ ನಂತರ ಇದೇ ಪ್ರಥಮ ಬಾರಿಗೆ ಹೇರ್‍ಕಟ್ಟಿಂಗ್ ಸಲೂನ್‍ಗಳು ತೆರೆಯಲ್ಪಟ್ಟಿದ್ದರಿಂದ, ಬೆಳಿಗ್ಗೆಯಿಂದಲೇ ಅಂಗಡಿಗಳ ಎದುರು ಗ್ರಾಹಕರು ಕಂಡುಬಂದರು. ಕ್ಷೌರಿಕರಿಗೆ ಬಿಡುವಿಲ್ಲದ ಕೆಲಸ ಇತ್ತು. ಅಂಗಡಿಗಳ ಒಳಗೆ ಮತ್ತು ಹೊರ ಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರು ಕಟ್ಟಿಂಗ್ ಮಾಡಿಸಿಕೊಂಡರು.
ಚಿನ್ನಕ್ಕಿಲ್ಲ ಬೇಡಿಕೆ: ಆಭರಣ ಮಳಿಗೆಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಸಹ ಸಾರ್ವಜನಿಕರು ಚಿನ್ನ, ಬೆಳ್ಳಿ ಖರೀದಿಯತ್ತ ಮನಸ್ಸು ಮಾಡಲಿಲ್ಲ. ಬಹುತೇಕ ಆಭರಣ ಮಳಿಗೆಗಳನ್ನು ಶುಚಿಗೊಳಿಸುವಲ್ಲಿ ಸಿಬ್ಬಂದಿಗಳು ತೊಡಗಿಕೊಂಡಿದ್ದರು.
ಸಂತೆಯಲ್ಲಿಲ್ಲ ಸಾಮಾಜಿಕ ಅಂತರ: ಪಟ್ಟಣದ ಅಂಗಡಿ ಮುಂಗಟ್ಟು, ಮದ್ಯದಂಗಡಿಗಳ ಎದುರು ಸಾಮಾಜಿಕ ಅಂತರ ಕಂಡುಬಂದರೂ ಸಂತೆ ನಡೆದ ಆರ್‍ಎಂಸಿ ಪ್ರಾಂಗಣದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ.
ಬೆಳಿಗ್ಗೆಯಿಂದ ಮಧ್ಯಾಹ್ನ 3.30ರವರೆಗೂ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟ ಕಂಡುಬಂತು. ಸಂಜೆ 4 ಗಂಟೆಯಾಗುತ್ತಲೇ ಪೊಲೀಸರು ವಾಹನಗಳಲ್ಲಿ ಸೈರನ್ ಮೊಳಗಿಸುತ್ತಾ ಪಟ್ಟಣದಾದ್ಯಂತ ಸಂಚರಿಸಿ ಲಾಕ್‍ಡೌನ್ ಬಗ್ಗೆ ಜಾಗೃತಿ ಮೂಡಿಸಿದರು. 4 ಗಂಟೆಯ ನಂತರ ಪಟ್ಟಣದಲ್ಲಿ ನೀರವತೆ ಆವರಿಸಿತು. ಠಾಣಾಧಿಕಾರಿ ಶಿವಶಂಕರ್, ವೃತ್ತ ನಿರೀಕ್ಷಕ ನಂಜುಂಡೇಗೌಡ ಸೇರಿದಂತೆ ಸಿಬ್ಬಂದಿಗಳು ಪಟ್ಟಣದಾದ್ಯಂತ ಸಂಚರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಆಗಾಗ್ಗೆ ಜಾಗೃತಿ ಮೂಡಿಸುತ್ತಿದ್ದರು. -ವಿಜಯ್
ಶನಿವಾರಸಂತೆ: ಸೋಮವಾರ ಪಟ್ಟಣ ಹಾಗೂ ಸುತ್ತಮುತ್ತ 4 ಮದ್ಯದಂಗಡಿಗಳು ತೆರೆದಿದ್ದು, ಮದ್ಯಪ್ರಿಯರು ಸಾಲಿನಲ್ಲಿ ನಿಂತರೂ ಅಂತರ ಕಾಯ್ದುಕೊಳ್ಳದೇ ಮದ್ಯ ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಮದ್ಯಪ್ರಿಯರು ಖರೀದಿಯಲ್ಲಿ ಅಂತಹ ಉತ್ಸಾಹ ತೋರದೆ ವಿರಳ ಸಂಖ್ಯೆಯಲ್ಲಿ ಮದ್ಯ ಖರೀದಿಸಿ ತೆರಳುತ್ತಿದ್ದದು, ಅಚ್ಚರಿ ಮೂಡಿಸಿತು. ಪಟ್ಟಣ ವ್ಯಾಪ್ತಿಯಲ್ಲಿ 12 ಬಂಗಾರದ ಅಂಗಡಿಗಳು, 7 ಸಲೂನ್‍ಗಳು ಹಾಗೂ 3-4 ಬ್ಯೂಟಿ ಪಾರ್ಲರ್‍ಗಳು ತೆರೆದಿದ್ದವು. ಲಾಕ್‍ಡೌನ್ ಸಡಿಲಿಕೆಯಾಗಿದ್ದರೂ ಸಾರ್ವಜನಿಕರು ಹೊಂದಿಕೊಂಡಿದ್ದು ಸಮಯ ಪಾಲಿಸುತ್ತಾ ತಮ್ಮ ತಮ್ಮ ಕೆಲಸ ಮುಗಿಸಿ ಯಾಂತ್ರಿಕವಾಗಿ ಮನೆಯತ್ತ ಮರಳುತ್ತಿದ್ದಾರೆ. ಪಟ್ಟಣ ತನ್ನಷ್ಟಕೆ ತಾನೇ ಸ್ಥಬ್ಧವಾಗುತ್ತಿದೆ.
- ನರೇಶ್‍ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯ 6 ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ನಡೆದಿದ್ದು ಸಂಜೆ 4 ಗಂಟೆ ತನಕ ನಿರಂತರವಾಗಿ ಗ್ರಾಹಕರಿಗೆ ನೀಡುವ ಕೆಲಸ ನಡೆಯಿತು.
ಬೆಳಗಿನ ವೇಳೆ ಆರಂಭದಲ್ಲಿ ಕೆಲವು ಮಂದಿ ಸಾಲಾಗಿ ಮದ್ಯ ಖರೀದಿಗೆ ನಿಂತಿದ್ದು ಕಂಡುಬಂದರೂ 10 ಗಂಟೆ ವೇಳೆಗೆ ಭಾರೀ ಉದ್ದದ ಸಾಲಿನೊಂದಿಗೆ ಜನಸಂದಣಿ ಗೋಚರಿಸಿತು. ಕೊಡಗು ಜಿಲ್ಲಾ ಅಬಕಾರಿ ನಿರೀಕ್ಷಕರಾದ ಚೈತ್ರ, ಕುಶಾಲನಗರ ಠಾಣಾಧಿಕಾರಿ ಗಣೇಶ್ ಕುಶಾಲನಗರದ ಮದ್ಯದಂಗಡಿಗಳಿಗೆ ಭೇಟಿ ನೀಡಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್, ಕರ್ಚಿಫ್, ಟವಲ್ ಧರಿಸಿ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಮುಂದಾದರೂ ಕೆಲವು ಕಡೆಗಳಲ್ಲಿ ಸಾಮಾಜಿಕ ಅಂತರ ಮರೆತಿರುವುದು ಗೋಚರಿಸಿತು. ಯಾವುದೇ ರೀತಿಯ ನೂಕುನುಗ್ಗಲಿಲ್ಲದೆ ಶಿಸ್ತುಬದ್ದವಾಗಿ ಮದ್ಯ ಖರೀದಿಸಿದರು.
ಈ ನಡುವೆ ಮಾರುಕಟ್ಟೆ ರಸ್ತೆಯ ಮದ್ಯದಂಗಡಿ ಬೆಳಗ್ಗೆ 9 ಗಂಟೆಗೆ ಬಾಗಿಲು ತೆರೆದು 11 ಗಂಟೆಗೆ ನೋ ಸ್ಟಾಕ್ ಫಲಕ ಹಾಕಿದ್ದರಿಂದ ಗ್ರಾಹಕರಿಂದ ಆಕ್ರೋಶ ವ್ಯಕ್ತವಾಯಿತು. ಮದ್ಯವಿದ್ದರೂ ಇಲ್ಲ ಎಂದು ಬಾಗಿಲು ಹಾಕಿ ನಂತರ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಬಗ್ಗೆ ಆರೋಪಗಳು ಕೂಡ ಕೇಳಿಬಂದವು. ಇನ್ನೊಂದೆಡೆ ತರಕಾರಿ ಮಾರಿ ದೊರೆತ ಲಾಭದಲ್ಲಿ 3 ಬಾಟಲ್ ಮದ್ಯವನ್ನು ಬ್ಯಾಗ್‍ನಲ್ಲಿ ಒಯ್ಯುತ್ತಿದ್ದ ಸಂದರ್ಭ ಕುಶಾಲನಗರ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಅದನ್ನು ಪೊಲೀಸರು ವಶಪಡಿಸಿಕೊಂಡು ತೆರಳುತ್ತಿದ್ದ ವಾಹನವನ್ನು ಕೂಡ ಜಪ್ತಿ ಮಾಡಿದ ಘಟನೆಯೂ ನಡೆಯಿತು.
ಸಲೂನ್‍ನಲ್ಲಿ ‘ಸ್ಲೋ ಬಿಸಿನೆಸ್’
ಕುಶಾಲನಗರ: ಸೋಮವಾರ ಬೆಳಗಿನಿಂದ ಪ್ರಾರಂಭಗೊಂಡ ಸಲೂನ್ ನಲ್ಲಿ ಮಾತ್ರ ಹೆಚ್ಚಿನ ಜನರು ಕಂಡುಬಂದಿಲ್ಲ. ಮದ್ಯದಂಗಡಿ ಸಮೀಪ ಕಂಡುಬಂದ ಜನಸಂದಣಿ ಪಟ್ಟಣದ ಯಾವುದೇ ವ್ಯಾಪ್ತಿಯಲ್ಲಿ ಕಂಡುಬರದೆ ಬಹುತೇಕ ವ್ಯಾಪಾರ ವಹಿವಾಟುಗಳು ಕೂಡ ಕ್ಷೀಣಗೊಂಡ ದೃಶ್ಯ ಗೋಚರಿಸಿತು.
ಕುಶಾಲನಗರದಿಂದ ಗಡಿಭಾಗ ಕೊಪ್ಪ ಕಡೆಗೆ ತೆರಳುವ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಶಾಸಕರು ಸೂಚನೆ ನೀಡಿದರು.ಮದ್ಯಕ್ಕಾಗಿ ಕುಶಾಲನಗರ ಗಡಿ ದಾಟಲು ಯತ್ನ
ಕಣಿವೆ : ಕುಶಾಲನಗರದ ಮಾರುಕಟ್ಟೆ ರಸ್ತೆ, ಸೋಮೇಶ್ವರ ದೇಗುಲ ರಸ್ತೆ, ಐ ಬಿ ರಸ್ತೆ, ಬಿಎಂ ರಸ್ತೆ ಸೇರಿ ಹತ್ತಕ್ಕೂ ಹೆಚ್ಚಿನ ಮದ್ಯದ ಅಂಗಡಿಗಳ ಮುಂದೆ ಜನ ಸಾಲು ಸಾಲು ನಿಂತಿದ್ದ ಚಿತ್ರಣ ಕಂಡು ಬಂತು. ಅನಾರೋಗ್ಯ ಪೀಡಿತರು, ಕಾರ್ಮಿಕರು, ಸಾಮಾನ್ಯ ಜನರು ಈ ಸಾಲುಗಳಲ್ಲಿ ಕಂಡು ಬಂದರು. ಕೆಲವು ಮದ್ಯದ ಅಂಗಡಿಗಳಲ್ಲಿ ಎಂಆರ್ ಪಿ ದರಕ್ಕಿಂತಲೂ ಹೆಚ್ಚು ಹಣ ಪಡೆಯುತ್ತಿದ್ದ ದೂರುಗಳು ಕೆಲವು ಮದ್ಯಪ್ರಿಯರಿಂದ ಕೇಳಿ ಬಂದವು. ಈ ಬಗ್ಗೆ ಐಬಿ ರಸ್ತೆಯಲ್ಲಿ ಮದ್ಯದ ಅಂಗಡಿ ಒಂದರ ಬಳಿ ತೆರಳಿ ವಿಚಾರಿಸಿದಾಗ ಹೆಚ್ಚು ಹಣ ವಸೂಲಿ ಮಾಡುತ್ತಿದ್ದುದು ಗೋಚರಿಸಿತು. ಇನ್ನು ಕೆಲವು ಮದ್ಯದ ಅಂಗಡಿಗಳಲ್ಲಿ ಮದ್ಯದ ಬಾಟಲಿಗಳ ಸಂಗ್ರಹವಿಲ್ಲದೇ ಮಧ್ಯಾಹ್ನ 12 ಗಂಟೆಯ ಒಳಗೆಯೇ ಮದ್ಯದ ಅಂಗಡಿಗಳ ಬಾಗಿಲು ಮುಚ್ಚಿದ ಬಗ್ಗೆಯೂ ಗೋಚರಿಸಿತು. ಮದ್ಯ ಮಾರಾಟ ಪಾರ್ಸೆಲ್ ಗೆ ಮಾತ್ರ ಎಂಬ ನಿಯಮವಿದ್ದಾಗ್ಯೂ ಕೆಲವು ಮದ್ಯದ ಅಂಗಡಿಗಳ ಬಳಿ ಕೆಲವು ವ್ಯಸನಿಗಳು ಕುಡಿದು ರಸ್ತೆ ಬದಿ ಬಿದ್ದಿದ್ದ ಚಿತ್ತಣವೂ ಗೋಚರಿಸಿತು. ಕುಶಾಲನಗರ ಪಟ್ಟಣಕ್ಕೆ ಬಂದು ಮದ್ಯವನ್ನು ಖರೀದಿಸಲು ಕಾವೇರಿ ನದಿಯಾಚೆಯ ಕೆಲವು ಮದ್ಯಪ್ರಿಯರು ಪ್ರಯತ್ನಪಟ್ಟು ಕಾವೇರಿ ನದಿಯ ಸೇತುವೆ ಬಳಿ ಬಂದರಾದರೂ ಪೆÇೀಲೀಸರು ಅವರನ್ನು ಒಳ ಪ್ರವೇಶಿಸಲು ಬಿಡದ ಘಟನೆಯೂ ನಡೆಯಿತು. -ಮೂರ್ತಿಶ್ರೀಮಂಗಲ: ಟಿ. ಶೆಟ್ಟಿಗೇರಿ ಮತ್ತು ಶ್ರೀಮಂಗಲದ ಮದ್ಯದ ಮಳಿಗೆಯ ಎದುರಿನಲ್ಲಿ ರಸ್ತೆ ಬದಿಯಲ್ಲಿ ಮದ್ಯಪ್ರಿಯರು ಗಂಟೆಗಟ್ಟಲೆ ನಿಂತು ಮದ್ಯ ಪಡೆದರು.
ಸುಮಾರು 100 ಮಂದಿಗೆ ಸಾಮಾಜಿಕ ಅಂತರದಲ್ಲಿ ಒಂದು ಮೀಟರ್‍ಗೆ ಒಬ್ಬ ನಿಲ್ಲುವಂತೆ ಮಾರ್ಕ್ ಮಾಡಲಾಗಿತ್ತು ಸುಡು ಬಿಸಿಲಿನಲ್ಲಿಯೇ ಮದ್ಯಪ್ರಿಯರು ಮದ್ಯಕ್ಕಾಗಿ ಸಾಲಿನಲ್ಲಿ ನಿಂತು ಕಾದರು. ವೈನ್ ಶಾಪ್‍ನಲ್ಲಿ ಒಬ್ಬರಿಗೆ 1 ಲೀ ನಷ್ಟು ಮದ್ಯವನ್ನು ಮಾತ್ರ ನೀಡಲಾಗುತ್ತಿತ್ತು.
ಚಿನ್ನದ ಅಂಗಡಿಗಳಲ್ಲಿ ಗಿರವಿ ಇಡಲು ಭಾರೀ ಸಂಖ್ಯೆಯಲ್ಲಿ ಜನತೆ ಸೇರಿದ್ದರು ಸಲೂನ್ ಅಂಗಡಿಗಳಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು.
ಗೋಣಿಕೊಪ್ಪಲು: ಇಲ್ಲಿನ ಪಾನಪ್ರಿಯರಿಗೆ ಮಾಲೀಕರು ಸರಕಾರದ ನಿಯಮದಂತೆ ಸರತಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದರು.
ಪ್ರತಿ ಬಾರ್ ಮುಂದೆ ಜನಸಂದಣಿ ನಿಯಂತ್ರಣ ಮಾಡುವ ಸಲುವಾಗಿ ಪೆÇಲೀಸರನ್ನು ನಿಯೋಜನೆ ಮಾಡಲಾಗಿತ್ತು. ಪ್ರತಿ ಗ್ರಾಹಕರಿಗೆ ಎರಡು ಬಾಟಲಿ ಮದ್ಯ, ನಾಲ್ಕು ಬಿಯರ್ ಮಾತ್ರ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಒಂದು ಬಾರ್‍ನಲ್ಲಿ ಖರೀದಿಸಿ ಮತ್ತೊಂದು ಬಾರ್ ಮುಂದೆ ತೆರಳಿ ಅಲ್ಲಿಯೂ ಸರತಿ ಸಾಲಿನಲ್ಲಿ ಅಲ್ಲಿಯು ಮದ್ಯ ಖರೀದಿಸುತ್ತಿದ್ದುದು ಕಂಡು ಬಂತು.
ನಗರದಲ್ಲಿ ಜನಸಂದಣಿ ಎಂದಿಗಿಂತ ಹೆಚ್ಚಾಗಿ ಕಂಡುಬಂತು. ವಾಹನ ದಟ್ಟಣೆ ನಿಯಂತ್ರಣ ಮಾಡಲು ಮುಂಜಾಗ್ರತಾ ಕ್ರಮವಾಗಿ ಆಯಕಟ್ಟಿನಲ್ಲಿ ಪೆÇಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸರ್ಕಲ್ ಇನ್ಸ್ ಪೆಕ್ಟರ್ ರಾಮರೆಡ್ಡಿ ನಗರದ ಬೈ ಪಾಸ್ ರಸ್ತೆಯಲ್ಲಿರುವ ವೈನ್ ಶಾಪ್‍ಗಳ ಮುಂದೆ ಜನತೆಗೆ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದರು.
- ಹೆಚ್.ಕೆ.ಜಗದೀಶ್
ಸಿದ್ದಾಪುರ : ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾಮದಲ್ಲಿ ಮದ್ಯದ ಅಂಗಡಿಯಲ್ಲಿ ದಾಸ್ತಾನು ಇಲ್ಲದೇ ಹಾಗೂ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಮದ್ಯದಂಗಡಿಗಳು ತೆರೆಯಲಿಲ್ಲ ಇದರಿಂದಾಗಿ ಬಹುದಿನಗಳಿಂದ ಮದ್ಯಕ್ಕಾಗಿ ಕಾಯುತ್ತಿದ್ದವರಿಗೆ ನಿರಾಸೆ ಉಂಟಾಯಿತು. ಮದ್ಯ ಸಿಗಬಹುದೆಂದು ಬೆಳಗಿನಿಂದಲೇ ಅಂಗಡಿಯ ಮುಂದೆ ನಿಂತಿದ್ದ ಮದ್ಯಪ್ರಿಯರು ಚಪ್ಪೆ ಮೋರೆಯೊಂದಿಗೆ ಹಿಂತಿರುಗುತ್ತಿದ್ದುದು ಕಂಡುಬಂತು.
ಕೆಲವು ವ್ಯಕ್ತಿಗಳು ಬೇರೆಯವರ ವಾಹನಗಳಲ್ಲಿ ಪಾಲಿಬೆಟ್ಟ ಅಮ್ಮತಿಗೆ ಮದ್ಯ ಖರೀದಿಸಲು ತೆರಳುತ್ತಿದ್ದದೂ ಗೋಚರಿಸಿತು. ಸಿದ್ದಾಪುರ ವ್ಯಾಪ್ತಿಯಲ್ಲಿ ಚಿನ್ನ ಮಾರಾಟದ ಅಂಗಡಿಗಳು ತೆರೆದಿದ್ದವು ಆದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಸಿದ್ದಾಪುರ ನೆಲ್ಲಿಹುದಿಕೇರಿ ಭಾಗದಲ್ಲಿ ಸಲೂನ್ ಅಂಗಡಿಗಳು ತೆರೆದಿದ್ದವು. ಆಟೋ ರಿಕ್ಷಾಗಳ ಓಡಾಟ ಕಂಡು ಬಂತು ಇದರಿಂದ ದೂರದ ಊರಿಗೆ ಪ್ರಯಾಣಿಸುವ ಗ್ರಾಮಸ್ಥರಿಗೆ ಸಾಮಗ್ರಿಗಳನ್ನು ಖರೀದಿಸಿಕೊಂಡು ತೆರಳಲು ಅನುಕೂಲವಾಯಿತು. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೆÇಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದರು.
- ವಾಸು