ಮಡಿಕೇರಿ, ಮೇ 4: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸುಮಾರು 14 ಮದ್ಯದ ಅಂಗಡಿಗಳೊಂದಿಗೆ ಇಂದು ಆಭರಣ ಮಳಿಗೆಗಳು, ಸಲೂನ್ ಅಂಗಡಿಗಳು ತೆರೆದುಕೊಂಡಿದ್ದರಿಂದ ಬಹುತೇಕ ಮಂದಿ ತಮ್ಮ ತಮ್ಮ ಅವಶ್ಯಕತೆ ಪೂರೈಕೆಯಿಂದ ನಿಟ್ಟುಸಿರು ಬಿಟ್ಟರು. ಇಲ್ಲಿನ ಕೆಎಸ್‍ಆರ್‍ಟಿಸಿ ಡಿಪೋ ಬಳಿಯಿಂದ ಚಿಕ್ಕಪೇಟೆ, ಜನರಲ್ ತಿಮ್ಮಯ್ಯ ವೃತ್ತ, ಶಾಲಾ ರಸ್ತೆ, ಖಾಸಗಿ ಬಸ್ ನಿಲ್ದಾಣ, ಕಾಲೇಜು ರಸ್ತೆಯ ಅಲ್ಲಲ್ಲಿ ಮದ್ಯದಂಗಡಿಗಳಲ್ಲಿ ಗ್ರಾಹಕರು ಅಂತರ ಕಾಯ್ದುಕೊಂಡು ಪಾರ್ಸಲ್‍ನಲ್ಲಿ ಮದ್ಯ ಒಯ್ಯುತ್ತಿದ್ದ ದೃಶ್ಯ ಕಂಡು ಬಂತು. ಕೆಲವರು ಮಾಮೂಲಿ ದರಕ್ಕೆ ಖರೀದಿಸಿದರೆ, ಕೆಲವರು ಅಧಿಕ ದರ ನೀಡಿದ್ದಾಗಿ ಹೇಳಿಕೊಂಡರು. ಈ ನಡುವೆ ಸಲೂನ್‍ಗಳಲ್ಲಿ ಅಧಿಕ ಮಂದಿ ಕಾಣಿಸಿಕೊಂಡರೆ, ಲಾಕ್‍ಡೌನ್ ನಡುವೆ ಚಿನ್ನ - ಬೆಳ್ಳಿ ದರ ಹೆಚ್ಚಾಗಿದ್ದರಿಂದ ಅತ್ತ ಯಾರೂ ಸುಳಿದಂತೆ ಕಾಣಲಿಲ್ಲ. ಸಂಜೆ 4 ಗಂಟೆಗೆ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಯಿತು. ಸಾಲಿನಲ್ಲಿ ನಿಂತವರು ಬರಿಕೈಯಲ್ಲಿ ಹಿಂತೆರಳಿದ ದೃಶ್ಯ ಕಂಡು ಬಂತು.