ಮಡಿಕೇರಿ, ಮೇ 4: ತಾ 5 ರಿಂದ ಪ್ರತೀ ದಿನ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅನುಮತಿ ನೀಡಿರುವ ಅಂಗಡಿಗಳನ್ನು ತೆರೆಯಬಹುದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮದ್ಯದ ಅಂಗಡಿಗಳನ್ನು ವಾರದ ಎಲ್ಲಾ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯ ಬಹುದಾಗಿದೆ. ನೆರೆ ರಾಜ್ಯಕ್ಕೆ ಹೊಂದಿ ಕೊಂಡಂತಿರುವ ಊರುಗಳ ಮದ್ಯದಂಗಡಿ ತೆರೆಯುವಂತಿಲ್ಲ. ಜಿಲ್ಲೆಯ ಎಲ್ಲಾ ಔಷಧಿ ಅಂಗಡಿಗಳನ್ನು ಹಗಲೂ ರಾತ್ರಿ ತೆರೆಯಬಹುದು.ವೈದ್ಯಕೀಯ ಅಥವಾ ತುರ್ತು ಸಂದರ್ಭದ ಕಾರಣ ಹೊರತುಪಡಿಸಿ ಕೊಡಗು ಜಿಲ್ಲೆಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ.ಟ್ಯಾಕ್ಸಿ, ಸರ್ಕಾರಿ ಮತ್ತು ಖಾಸಗಿ ಬಸ್ಗಳು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತಾ 6 ರಿಂದ ಸಂಚರಿಸಬಹುದು. ಆದರೆ ಈ ಬಸ್ ಗಳಲ್ಲಿ ಒಟ್ಟು ಆಸನ ಸಂಖ್ಯೆಯ ಶೇ.50 ರಷ್ಟು ಮಾತ್ರ ಪ್ರಯಾಣಿಕರು ಮೀರದಂತೆ ಸಂಚರಿಸಬೇಕು ಎಂದು ಅನೀಸ್ ಆದೇಶಿಸಿದ್ದಾರೆ.ಖಾಸಗಿ ಬಸ್ ಇಲ್ಲ: ಬಸ್ಗಳಲ್ಲಿ ಶೇ. 50 ರಷ್ಟು ಮಂದಿ ಮಾತ್ರ ಪ್ರಯಾಣಿಸಲು ಅವಕಾಶ ಇರುವದರಿಂದ ನಷ್ಟದಲ್ಲಿ ಬಸ್ಗಳನ್ನು ಓಡಿಸಬೇಕಿದ್ದು ಈ ಕಾರಣದಿಂದ ಜಿಲ್ಲೆಯಲ್ಲಿ ಖಾಸಗಿ ಬಸ್ಗಳನ್ನು ಓಡಿಸದಿರಲು ನಿರ್ಧರಿಸ ಲಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ. ತಾಂತ್ರಿಕವಾಗಿಯೂ ಶೇ. 50 ರಷ್ಟು ಮಂದಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವದು ಸಾಧ್ಯವಿಲ್ಲ, ಕಾನೂನು ಮೀರಿದರೆ ಆಡಳಿತ ಕ್ರಮಕೈಗೊಳ್ಳಲಿದೆ, ಒಟ್ಟಾರೆ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಲಿದ್ದು, ರಾಜ್ಯದ ಹಲವು ಜಿಲ್ಲೆಗಳು ಹಾಗೂ ಕೇರಳದಲ್ಲಿಯೂ ಖಾಸಗಿ ಬಸ್ಗಳು ಓಡಾಡದಿರಲು ತೀರ್ಮಾನಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಸಂದಣಿ ಗಮನಿಸಿ ಸಂಚಾರ: ಸರ್ಕಾರಿ ಬಸ್ಗಳನ್ನು ಗೋಣಿಕೊಪ್ಪ, ಕೊಡ್ಲಿಪೇಟೆ, ಕುಶಾಲನಗರ, ಸೋಮವಾರಪೇಟೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣಿಕರ ಸಂದಣಿಯನ್ನು ಗಮನಿಸಿ ತಾ. 6 ರಿಂದ (ನಾಳೆಯಿಂದ) ಓಡಿಸಲಾಗುವದು ಎಂದು ಡಿಪೋ ವ್ಯವಸ್ಥಾಪಕಿ ಗೀತಾ ‘ಶಕ್ತಿ’ಗೆ ತಿಳಿಸಿದ್ದಾರೆ.
ಮಾರುಕಟ್ಟೆ ಸ್ಥಳಾಂತರ
ಸರ್ಕಾರಿ ಬಸ್ಗಳು ತಾ. 6 ರಿಂದ ಸಂಚಾರ ಆರಂಭಿಸುವ ಹಿನ್ನೆಲೆಯಲ್ಲಿ ಇದುವರೆಗೂ ಸರ್ಕಾರಿ ಬಸ್ನಿಲ್ದಾಣದಲ್ಲಿ ನಡೆಯುತ್ತಿದ್ದ ಮಾರುಕಟ್ಟೆಯನ್ನು ಆರ್ಎಂಸಿ ಪ್ರಾಂಗಣ ಹಾಗೂ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿ ಸಲಾಗು ವದೆಂದು ನಗರಸಭಾ ಆಯುಕ್ತ ರಮೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.