ಮಡಿಕೇರಿ, ಮೇ 4: ಹೊರ ಜಿಲ್ಲೆ, ರಾಜ್ಯಗಳಿಂದ ಕೆಲಸ ಕಾರ್ಯಗಳಿಗಾಗಿ ಜಿಲ್ಲೆಗೆ ಆಗಮಿಸಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಸರಕಾರದ ಆದೇಶಾನುಸಾರ ಅವರ ಸ್ವಂತ ಸ್ಥಳಕ್ಕೆ ಕಳುಹಿಸಿಕೊಡಲಾಗುತ್ತಿದೆ.

ಮಡಿಕೇರಿ ಬಳಿಯ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ತಂಗಿದ್ದ 30 ಮಂದಿ ವಲಸೆ ಕಾರ್ಮಿಕರನ್ನು ಸಾರಿಗೆ ಸಂಸ್ಥೆ ಬಸ್ ಮೂಲಕ ಚಾಮರಾಜನಗರಕ್ಕೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಕ್ಕಪ್ಪನ ಕಾವೇರಮ್ಮ ಹರೀಶ್, ಸದಸ್ಯ ಬಿ.ಎನ್. ರಮೇಶ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಆಶಾ ಕಾರ್ಯಕರ್ತೆ ದಿವ್ಯಾ ಮುಂತಾದವರಿದ್ದು, ಕಾರ್ಮಿಕರನ್ನು ಬೀಳ್ಕೊಟ್ಟರು. ಉಳಿಕೆಯಾಗಿರುವ ಕಾರ್ಮಿಕರನ್ನು ನಾಳೆ ಕಳುಹಿಸಿಕೊಡಲಾಗುತ್ತದೆ.

ತಾಲೂಕಿನ ಮೇಕೇರಿ, ಹೊಸ್ಕೇರಿ ಬಳಿಯಿಂದ ಚಾಮ ರಾಜನಗರ ಜಿಲ್ಲೆಯ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದ ವತಿಯಿಂದ ಸ್ವಂತ ಊರುಗಳಿಗೆ ಉಚಿತವಾಗಿ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಕಳುಹಿಸಿಕೊಡಲಾಯಿತು. ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಇತರರು ಇದ್ದರು.