ಶನಿವಾರಸಂತೆ, ಮೇ 4: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಭಾರೀ ಬಿರುಗಾಳಿ ಸಹಿತ ಸುರಿದ ಮಳೆಗೆ 13 ಮನೆಗಳು, ಅಂಗಡಿ ಮಳಿಗೆಗಳ ಚಾವಣಿ ಹಾರಿಹೋಗಿದ್ದು ಮತ್ತೆ ಕೆಲವೆಡೆ ಶಾಲಾ ತಡೆಗೋಡೆ, ಇತರ ಕಟ್ಟಡಗಳು ಕುಸಿದು ಹಾನಿ ಸಂಭವಿಸಿದೆ.
ಶನಿವಾರಸಂತೆ ವಿಭಾಗದಲ್ಲಿ ವಾರದಿಂದ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದು ಭಾನುವಾರ ರಾತ್ರಿ 20 ಮಿಲಿಮೀಟರ್ ಮಳೆಯಾಗಿದೆ. ಗಾಳಿಯ ಆರ್ಭಟವೇ ಜೋರಾಗಿದ್ದು ಅರ್ಧ ಗಂಟೆ ಕಾಲ ಸತತವಾಗಿ ಬೀಸಿದೆ. ಬೆಳ್ಳಾರಳ್ಳಿ, ಚಿಕ್ಕಕೊಳತ್ತೂರು ಮತ್ತಿತರ ಗ್ರಾಮಗಳಲ್ಲಿ ಮರಗಿಡಗಳು ಧರೆಗುರುಳಿವೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಸೆಕ್ರೇಡ್ ಹಾರ್ಟ್ ಶಾಲೆಯ ತಡೆಗೋಡೆ, ಹೆಮ್ಮನೆ ಗ್ರಾಮದ ಪಶುಚಿಕಿತ್ಸೆ ಇಲಾಖೆಯ ಧರ್ಮರಾಜ್, ಸುಳುಗಳಲೆ ಕಾಲೋನಿಯಲ್ಲಿ ಸುಂದರ್, ಚಂದ್ರಣ್ಣ, ಮಹ್ಮದ್, ನಾಗಮ್ಮ ಗೋಪಾಲ್, ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್ ಕುಮಾರ್ ದುಂಡಳ್ಳಿ ಗ್ರಾಮದ ಸುಬ್ರಮಣ್ಯ, ಬಿದರೂರು ಗ್ರಾಮದ ಸರೋಜಮ್ಮ ಅವರ ಮನೆಗಳು ಹಾಗೂ ದೊಡ್ಡ ಬಿಳಾಹ ಗ್ರಾಮದ ಕೃಷಿಕ ಬಿ.ಎಂ. ಪ್ರಕಾಶ್ ಅವರ ದನದ ಕೊಟ್ಟಿಗೆಯ ಚಾವಣಿ ಹಾರಿ ಹೋಗಿವೆ. ಕಂದಾಯ ಇಲಾಖೆ ಉಪ ತಹಶೀಲ್ದಾರ್ ಗೋವಿಂದರಾಜ್ ಪರಿವೀಕ್ಷಕ ನಂದಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್ ಹಾಗೂ ಸಿಬ್ಬಂದಿ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು 5 ಮನೆಗಳು ಪರಿಹಾರಕ್ಕೆ ಅರ್ಹವಾಗಿವೆ ಎಂದು ತಿಳಿಸಿದ್ದಾರೆ.