ಸೋಮವಾರಪೇಟೆ, ಮೇ 3: ಇಲ್ಲಿನ ಶ್ರೀ ಮುತ್ತಪ್ಪ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರೋತ್ಸವ ಕೊರೊನಾ ಲಾಕ್‍ಡೌನ್ ಹಿನ್ನೆಲೆ ರದ್ದಾಗಿದ್ದು, ಇದಕ್ಕೆ ಭಕ್ತಾದಿಗಳಿಂದ ಸಂಗ್ರಹಿಸಿದ್ದ ದೇಣಿಗೆ ಹಣವನ್ನು ದೇವಾಲಯದ ಮುಖಮಂಟಪ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ತಿಳಿಸಿದ್ದಾರೆ.

ಕಳೆದ ಮಾರ್ಚ್ 15, 16, 17ರಂದು ಪ್ರತಿ ವರ್ಷದಂತೆ ದೇವಾಲಯದ ಜಾತ್ರೋತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಅಂತಿಮ ಸಿದ್ಧತೆಗಳನ್ನೂ ಕೈಗೊಳ್ಳಲಾಗಿತ್ತು. ಸಾರ್ವಜನಿಕ ಭಕ್ತಾದಿಗಳಿಂದ ಸಂಗ್ರಹಿಸಿದ್ದ ದೇಣಿಗೆ ಹಣದಲ್ಲಿ ಶೇ 70ರಷ್ಟು ಪೂರ್ವಸಿದ್ಧತೆಗೆ ವಿನಿಯೋಗಿಸಲಾಗಿತ್ತು. ಈ ಮಧ್ಯೆ ಕೊರೊನಾ ವೈರಸ್‍ನಿಂದಾಗಿ ಜಾತ್ರೋತ್ಸವ ರದ್ದುಗೊಂಡಿದ್ದು, ಉಳಿಕೆಯಾದ ಶೇ.30ರಷ್ಟು ಹಣದಲ್ಲಿ ದೇವಾಲಯಕ್ಕೆ ಮುಖ ಮಂಟಪ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ವಿನೋದ್ ಮಾಹಿತಿ ನೀಡಿದ್ದಾರೆ.

ದೇವಾಲಯದ ತಂತ್ರಿಗಳು ಹಾಗೂ ದೈವಜ್ಞರ ಮಾರ್ಗದರ್ಶನದಂತೆ ಮುಖಮಂಟಪ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಜಾತ್ರೋತ್ಸವಕ್ಕೆ ಸಂಗ್ರಹಿಸಿದ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಮುಂಬರುವ ದಿನಗಳಲ್ಲಿ ದೇವಾಲಯದಲ್ಲಿ ನಡೆಯುವ ದುರ್ಗಾ ದೀಪ ನಮಸ್ಕಾರ ಪೂಜೆಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.