ಐವರು ಯೋಧರು ಹುತಾತ್ಮ

ನವದೆಹಲಿ ಮೇ 3: ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಭಾನುವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಹುತಾತ್ಮ ಯೋಧರ ಪರಾಕ್ರಮ ಮತ್ತು ತ್ಯಾಗ ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ. ಹಂದ್ವಾರದಲ್ಲಿ ಹುತಾತ್ಮರಾದ ಧೈರ್ಯವಂತ ಯೋಧರು ಮತ್ತು ಭದ್ರತಾ ಸಿಬ್ಬಂದಿಗೆ ಗೌರವ ನಮನಗಳು. ಅವರ ತ್ಯಾಗ ಮತ್ತು ಶೌರ್ಯ ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ಟ್ವೀಟ್‍ನಲ್ಲಿ ಹೇಳಿದ್ದಾರೆ. ಹುತಾತ್ಮ ಯೋಧರು ಸಮರ್ಪಣಾ ಮನೋಭಾವದಿಂದ ನಾಗರಿಕರ ರಕ್ಷಣೆಗೆ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಪ್ರಧಾನಿಯವರು ಹುತಾತ್ಮರ ಕುಟುಂಬಗಳಿಗೆ ಮತ್ತು ಅವರ ಸ್ನೇಹಿತರಿಗೆ ಸಾಂತ್ವಾನ ಹೇಳಿದ್ದಾರೆ. ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮತ್ತು ಮೇಜರ್‍ವೊಬ್ಬರು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಇಬ್ಬರು ಯೋಧರು ಹಾಗೂ ಜಮ್ಮು ಮತ್ತು ಕಾಶ್ಮೀರದ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ ರಾಗಿದ್ದಾರೆ. ಉಗ್ರರ ಬಳಿ ಒತ್ತೆಯಾಳುಗಳಾಗಿದ್ದ ನಾಗರಿಕರನ್ನು ಭದ್ರತಾ ಪಡೆಗಳು ಸುರಕ್ಷಿತವಾಗಿ ಕರೆತಂದಿದ್ದು, ಈ ವೇಳೆ ಭಯೋತ್ಪಾದಕರು ನಡೆಸಿದ ದಾಳಿಗೆ ದಿಟ್ಟ ಉತ್ತರ ನೀಡಿ, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.

135 ಯೋಧರಿಗೆ ಕೊರೊನಾ ಸೋಂಕು

ನವದೆಹಲಿ, ಮೇ 3: ಕೊರೊನಾ ಮಹಾಮಾರಿ ಭಾರತೀಯ ಯೋಧರಿಗೂ ವಕ್ಕರಿಸಿದ್ದು 135 ಯೋಧರು ಕೊರೊನಾಗೆ ತುತ್ತಾಗಿದ್ದಾರೆ. ಈ ಹಿನ್ನೆಲೆ ದೆಹಲಿಯಲ್ಲಿನ ಸಿಆರ್‍ಪಿಎಫ್ ಹೆಡ್‍ಕ್ವಾಟರ್ಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ. ಬಿಎಸ್‍ಎಫ್ 126 ಬೆಟಾಲಿಯನ್ ಹಾಗೂ 178 ಬೆಟಾಲಿಯನ್ ಪಡೆಯ 15 ಮಂದಿ ಯೋಧರಲ್ಲಿ ವೈರಸ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 135ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಹೆಡ್‍ಕ್ವಾಟರ್ಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ. ವಿಶೇಷ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿ, ಡೆಪ್ಯೂಟಿ ಇನ್ಸ್‍ಪೆಕ್ಟರ್ ಜನರಲ್ ಸೇರಿದಂತೆ 40ಕ್ಕೂ ಹೆಚ್ಚು ಅಧಿಕಾರಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆ ಅವರನ್ನು ಹೋಂಕ್ವಾರಂಟೈನ್ ಮಾಡಲಾಗಿದೆ.

ಕೊರೊನಾ ವಾರಿಯರ್ಸ್‍ಗೆ ಸೇನೆ ಸಲಾಂ

ನವದೆಹಲಿ, ಮೇ 3: ದೇಶದಲ್ಲಿ ರಣಕೇಕೆ ಹಾಕುತ್ತಿರುವ ಕೊರೊನಾ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ಭಾರತೀಯ ಸೇನೆ ವಿಶೇಷ ಗೌರವ ಸಲ್ಲಿಸಿದೆ. ಹೆಲಿಕಾಪ್ಟರ್ ಮೂಲಕ ಕೊರೊನಾ ವಾರಿಯರ್ಸ್‍ಗಳ ಮೇಲೆ ಹೂಮಳೆ ಸುರಿಸುವ ಮೂಲಕ ಸೇನೆ ಗೌರವ ಸಲ್ಲಿಸಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳೂ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತೀಯ ವಾಯುಸೇನೆಯ ವಿಮಾನಗಳು ಸಂಚರಿಸುವ ಮೂಲಕ ಕೊರೊನಾ ವಾರಿಯರ್ಸ್‍ಗಳಿಗೆ ಗೌರವ ಸೂಚಿಸಿದೆ. ಕಳೆದ ಎರಡು ತಿಂಗಳುಗಳಿಂದ ಹಗಲು ರಾತ್ರಿ ಎನ್ನದೆ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಪೊಲೀಸರು, ಪೌರಕಾರ್ಮಿಕರು, ಮಾಧ್ಯಮ ಪತ್ರಕರ್ತರು ಸೇರಿದಂತೆ ಹಲವು ಸಂಖ್ಯೆಯ ಸ್ವಯಂಸೇವಕರು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಕುಟುಂಬ ಹಾಗೂ ಸಂಸಾರದಿಂದ ದೂರ ಉಳಿದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರೆ. ಇವರೆಲ್ಲರೂ ಈ ಗೌರವಕ್ಕೆ ಅರ್ಹರಾಗಿದ್ದಾರೆ.

ಕೆ.ಎಸ್. ನಿಸಾರ್ ಅಹಮ್ಮದ್ ವಿಧಿವಶ

ಬೆಂಗಳೂರು, ಮೇ 3: ಹಿರಿಯ ಸಾಹಿತಿ ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ವಿಧಿವಶ ರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ. 84 ವರ್ಷ ವಯಸ್ಸಿನ ನಿಸಾರ್ ಅಹಮ್ಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 1936ರ ಫೆ. 5 ರಂದು ಜನಿಸಿದ್ದರು. ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು, ನಿತ್ಯೋತ್ಸವ ಪ್ರಮುಖ ಕವನಸಂಕಲನಗಳು. ನಿಸಾರ್ ಅಹಮ್ಮದ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, 1981ರ ರಾಜ್ಯೋತ್ಸವ ಪ್ರಶಸ್ತಿ, 2003ರ ನಾಡೋಜ ಪ್ರಶಸ್ತಿ, 2006ರ ಅರಸು ಪ್ರಶಸ್ತಿ, 2006ರ ಮಾಸ್ತಿ ಪ್ರಶಸ್ತಿ ಲಭಿಸಿವೆ.

ಒಂದೇ ದಿನ 21 ಪ್ರಕರಣ ಪಾಸಿಟಿವ್

ದಾವಣೆಗೆರೆ, ಮೇ 3: ವಾರದ ಹಿಂದಷ್ಟೇ ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ಇಂದು ಒಂದೇ ದಿನ 21 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ನಿನ್ನೆ 10 ಪ್ರಕರಣಗಳು ಕಂಡುಬಂದಿದ್ದ ದಾವಣಗೆರೆಯಲ್ಲಿ ಇಂದು 21 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೇ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ ಆಗಿದೆ. ಈ ಮೂಲಕ ದಾವಣೆಗೆರೆ ಕೆಂಪು ವಲಯದತ್ತ ಸಾಗುತ್ತಿದೆ. ಮೊನ್ನೆ 94, ನಿನ್ನೆ 72 ಇಂದು 164 ಒಟ್ಟಾರೇ 330 ಜನರ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸ ಲಾಗಿತ್ತು. ಈ ಪೈಕಿ 37 ಜನರ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 21 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹರಿಹರಕ್ಕೂ ಕೊರೊನಾ ವೈರಸ್ ಸೋಂಕು ಹರಡಿರುವ ಸಾಧ್ಯತೆ ಇದೆ ಎಂಬದು ತಿಳಿದುಬಂದಿದೆ. ರಾಜ್ಯದಲ್ಲಿ ಇಂದು 13 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದಾವಣಗೆರೆಯಲ್ಲಿ 21 ಪ್ರಕರಣಗಳು ಸೇರಿದಂತೆ ಒಟಾರೇ ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆಯಾಗಿದೆ.

ಸರ್ಕಾರದ ವಿರುದ್ಧ ಡಿಕೆಶಿ ವಾಗ್ಧಾಳಿ

ಬೆಂಗಳೂರು, ಮೇ 3: ವಲಸೆ ಕೂಲಿ ಕಾರ್ಮಿಕರ ಕಷ್ಟ ಸುಖಗಳನ್ನು ಸರ್ಕಾರದ ಒಬ್ಬ ಸಚಿವರಾಗಲಿ, ಪ್ರತಿನಿಧಿಗಳಾಗಲಿ ಬಂದು ಆಲಿಸಿಲ್ಲ. ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಯಕರ ತಂಡ ಇಂದು ನಗರದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ತಮ್ಮೂರುಗಳಿಗೆ ಪ್ರಯಾಣಿಸಲು ಸಿದ್ಧರಾಗಿ ಬಂದಿದ್ದ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಲು ಬಂದರು. ಬಸ್ಸಿನೊಳಗೆ ಕುಳಿತಿದ್ದ ಕಾರ್ಮಿಕರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಖುದ್ದು ವಿಚಾರಿಸಿದರು. ವಿವಿಧ ಊರುಗಳಿಗೆ ತೆರಳಲು ಬಂದಿದ್ದ ಮಹಿಳೆಯರು, ಮಕ್ಕಳನ್ನು ಮಾತನಾಡಿಸಿದರು. ಸರ್ಕಾರ ಕೂಲಿ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಲು ಇನ್ನೂ ವ್ಯವಸ್ಥೆಗಳನ್ನು ಸರಿಯಾಗಿ ಮಾಡಿಲ್ಲ. ಜನರು ಇಲ್ಲಿಗೆ ಬಂದು ಇನ್ನೂ ಆತಂಕದಲ್ಲಿದ್ದಾರೆ. ನಾವಿಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಸರ್ಕಾರದ ಒಬ್ಬ ಸಚಿವರುಗಳೂ ಬಾರದ ಕಾರಣ ಜನರ ಕಷ್ಟ ಆಲಿಸಲು ಬಂದಿದ್ದೇವೆ. ಇಲ್ಲಿ ಏನು ನಡೆಯುತ್ತಿದೆ ಎಂದು ಮಾಧ್ಯಮಗಳಿಂದಷ್ಟೇ ಗೊತ್ತಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬ್ರಿಟನ್ ಪ್ರಧಾನಿಗೆ ಕಠಿಣ ಸನ್ನಿವೇಶ

ಲಂಡನ್, ಮೇ 3: ತಮ್ಮ ಸಾವನ್ನು ಘೋಷಿಸಲು ವೈದ್ಯರು ಸಿದ್ಧತೆ ನಡೆಸಿದ್ದರು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಾವು ಎದುರಿಸಿದ ಕಠಿಣ ಸನ್ನಿವೇಶವನ್ನು ಬಹಿರಂಗಪಡಿಸಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿರುವ ಬೋರಿಸ್ ಜಾನ್ಸನ್ ಅವರು ನಾನು ಸತ್ತೆ ಹೋಗುತ್ತೆನೆಂದು ವೈದ್ಯರು ಅದನ್ನು ಘೋಷಿಸಲು ಸಿದ್ಧತೆ ನಡೆಸಿದ್ದರು ಎಂದು ಹೇಳಿದ್ದಾರೆ.