ಮಡಿಕೇರಿ, ಮೇ 3 : ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಮುಖಗವಸುಗಳ ಬಳಕೆಯನ್ನು ಸರಕಾರವು ಕಡ್ಡಾಯಗೊಳಿಸಿದೆ. ಅಂಗಡಿ ಮುಂಗಟ್ಟುಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಿದ್ದು ವಿವಿಧ ಸಂಘ ಸಂಸ್ಥೆಗಳು , ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯೂ ಕೂಡ ಮುಖಗವಸುಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಆದರೆ, ಇದೀಗ ನಾವೇನು ಕಡಿಮೆಯಿಲ್ಲ ಎಂಬಂತೆ ಸ್ವಸ್ಥ ಶಾಲೆಯ ಮಕ್ಕಳು ಮುಖಗವಸುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ವಿಶೇಷ ಚೇತನರ ತಂಡವು ಕಳೆದ ಒಂದು ತಿಂಗಳಿನಿಂದ ಸುಂಟಿಕೊಪ್ಪದ ಸ್ವಸ್ಥ ಕೇಂದ್ರದಲ್ಲಿ ಬೃಹತ್ ಸಂಖ್ಯೆಯಲ್ಲಿ ಮುಖಗವಸುಗಳ ತಯಾರಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಈ ತಂಡದಲ್ಲಿ 6 ವಿದ್ಯಾರ್ಥಿಗಳಿದ್ದು, ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರ ಮಾರ್ಗದರ್ಶನದಲ್ಲಿ ಮುಖಗವಸು ಗಳನ್ನು ತಯಾರಿಸಲಾಗುತ್ತಿದೆ.
ಟಾಟಾ ಸಂಸ್ಥೆ ಮತ್ತು ಟಾಟಾ ಕಾಫಿ ಲಿಮಿಟೆಡ್ ನೌಕರರಿಗೆ ಬಳಸಲು ಆರಂಭಗೊಂಡ ಮುಖಗವಸು ತಯಾರಿಯ ಕಾಯಕವು ಅಂತೆಯೇ ಮುಂದುವರಿದು, ತುರ್ತು ಕೋರಿಕೆಯ ಮೇರೆಗೆ ಸಾರ್ವಜನಿಕ ಇಲಾಖೆಗಳಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಮುಖಗವಸುಗಳನ್ನು ಒದಗಿಸುತ್ತಾ ಬಂದಿದೆ. ಟಾಟಾ ಕಾಫಿ, ಕಾಫಿ ಕ್ಯೂರ್ಸ್ ಅಸೋಸಿಯೇಷನ್ -ಕುಶಾಲನಗರ, ಇನ್ನರ್ ವ್ಹೀಲ್ ಕ್ಲಬ್ -ಕುಶಾಲನಗರ, ಶಿಕ್ಷಣ ಸಂಸ್ಥೆಗಳು, ಕಾಫಿ ಬೆಳೆಗಾರರು ಮತ್ತು ಔಷಧ ಮಳಿಗೆಗಳಿಗೆ ಸ್ವಸ್ಥದಲ್ಲಿ ಮುಖಗವಸು ಗಳನ್ನು ತಯಾರಿಸಿ ನೀಡಲಾಗಿದೆ. ಇನ್ನಷ್ಟು ಸಂಘ-ಸಂಸ್ಥೆಗಳಿಗೆ ಒದಗಿಸಲು ಕಾರ್ಯ ನಡೆದಿದೆ ಎಂದು ಆರತಿ ಸೋಮಯ್ಯ ತಿಳಿಸಿದ್ದಾರೆ.
ಕಾಟನ್ ಬಟ್ಟೆಯಿಂದ ತಯಾರಿಸಿದ ಸುಮಾರು 14000 ಮುಖಗವಸುಗಳನ್ನು ತಯಾರಿಸ ಲಾಗಿದ್ದು, ವಿವಿಧ ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ,
ಸಾರ್ವಜನಿಕರಿಗೂ ಬೇಕಾದಲ್ಲಿ ಮೊ. 87623-03554 ಸಂಪರ್ಕಿಸ ಬಹುದಾಗಿದೆ ಅಥವಾ ಸ್ವಸ್ಥ ಸುಂಟಿಕೊಪ್ಪ ಕೇಂದ್ರದಲ್ಲಿ ಮಾರಾಟದ ವ್ಯವಸ್ಥೆಯಿದೆ. ಪ್ರತಿ ಮುಖಗವಸನ್ನು ರೂ.7 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.