ಗೋಣಿಕೊಪ್ಪಲು, ಮೇ 3: ಹುದಿಕೇರಿ ಹೋಬಳಿ ನಡಿಕೇರಿ ಗ್ರಾಮದಲ್ಲಿ 5 ಆನೆಗಳ ಸಹಕಾರ ಪಡೆದು ಕಳೆದ ಎಂಟು ದಿನಗಳಿಂದ ಹುಲಿಯ ಸೆರೆಗೆ ಪ್ರಯತ್ನ ನಡೆಯುತ್ತಿದ್ದರೆ, ಇತ್ತ ಬಾಳೆಲೆ ಹೋಬಳಿಯ ದೇವನೂರು ಗ್ರಾಮದಲ್ಲಿ ಭಾನುವಾರ ಮುಂಜಾನೆ ಹುಲಿ ಕಾಣಿಸಿಕೊಂಡು ಕಾಂಡೇರ ಭೀಮಯ್ಯ ಅವರ ಎಮ್ಮೆಯ ಮೇಲೆ ದಾಳಿ ನಡೆಸಿ ತೊಡೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಹುಲಿ ಸೆರೆ ಕಾರ್ಯಾಚರಣೆಗೆ ಕೂಂಬಿಂಗ್ ನಡೆಸುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯ ಅಧಿಕಾರಿ ಶಿವಪ್ರಸಾದ್ ಮುಂದಾಳತ್ವದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡವು ಮಹಾರಾಷ್ಟ್ರದ ಭೀಮ ಹಾಗೂ ಶ್ರೀಕಂಠ ಎಂಬ ಸಾಕಾನೆಗಳ ಸಹಾಯ ಪಡೆದು ಸಂಜೆಯ ವೇಳೆಯಲ್ಲಿ ದೇವನೂರು ಕೀರೆಹೊಳೆ ಬದಿಯಲ್ಲಿ ಹಾಗೂ ಸ್ವಾತಿ ಕುಟ್ಟಯ್ಯ ಅವರ ಕಾಫಿ ತೋಟಕ್ಕಾಗಿ ಹುಲಿ ಸಂಚಾರ ಮಾಡಿರುವ ಹೆಜ್ಜೆ ಗುರುತುಗಳನ್ನು ಆದರಿಸಿ ಕೂಂಬಿಂಗ್ ಕಾರ್ಯ ನಡೆಸಿದರು.
ಸುಳುಗೋಡು, ಲಕ್ಷ್ಮಣತೀರ್ಥ ಕಳ್ಳಬೇಟೆ ತಡೆ ಶಿಬಿರ ಸಹಾಯ ಪಡೆದು ಹುಲಿಯ ಚಲನವಲನದ ಬಗ್ಗೆ ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಕೂಂಬಿಂಗ್ ಮುಂದುವರಿಸುವುದಾಗಿ ಅಧಿಕಾರಿಗಳು ಮಾಹಿತಿ ಒದಗಿಸಿದರು.
ಆದೇಂಗಡ ವಿಜಯ್ ಕುಮಾರ್ ಅವರ ಕಾಡು ಬೈಲ್ ಕಾಫಿ ತೋಟದಲ್ಲಿ ಹುಲಿ ಸಂಚಾರ ಮಾಡಿರುವ ಹೆಜ್ಜೆ ಗುರುತುಗಳು ಕೂಂ ಬಿಂಗ್ ಸಂದರ್ಭ ಕಂಡು ಬಂದವು. ಇಲಾಖೆಯ ಅಧಿಕಾರಿಗಳಾದ ರಾಜಪ್ಪ, ಪ್ರಶಾಂತ್, ಉಮಾಶಂಕರ್, ರಮೇಶ್, ಸೇರಿದಂತೆ 23ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.