ಕೊರೊನಾದ ಆರಂಭಿಕ ವ್ಯಕ್ತಿಗೆ ಕೊರೊನಾ ಸೋಂಕು ಇದೆಯೋ, ಇಲ್ಲವೋ ಎಂಬುದನ್ನು ದೃಢಪಡಿಸಲು, ಅವರ ಗಂಟಲ ದ್ರವ, ಜ್ವರ ತಪಾಸಣೆ, ಮುಂದುವರೆದು ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಂತರ ವ್ಯಕ್ತಿಯ ತಾಳ್ಮೆಯನ್ನು ಪರೀಕ್ಷಿಸುವಂತೆ ಹಲವು ದಿನಗಳ ನಂತರ ಪರೀಕ್ಷೆಯ ವರದಿ ಬರುತ್ತಿತ್ತು. ಅಷ್ಟರಲ್ಲಿ ಆ ವ್ಯಕ್ತಿಗೆ ಯಾವುದೇ ರೀತಿಯ ಚಿಕಿತ್ಸೆಯೂ ದೊರಕದೆ ಸಾವನ್ನಪ್ಪಿರುವ ಘಟನೆಗಳೂ ಹಲವೆಡೆಗಳಲ್ಲಿ ವರದಿಯಾಯಿತು. ದೇಶ, ರಾಜ್ಯ ಸರಕಾರಗಳ, ವಿವಿಧ ಇಲಾಖೆಗಳ ಶ್ರಮಗಳಿಂದಾಗಿ, ಒಂದೇ ದಿನದಲ್ಲಿ ಕೊರೊನಾ ಪರೀಕ್ಷೆಯ ವರದಿ ಬರುವಂತೆ ವ್ಯವಸ್ಥೆಗಳು ಆಗಿವೆ. ಆದರೆ ಇದೀಗ ವಿಶ್ವದ ಪ್ರಮುಖ ರಾಷ್ಟ್ರಗಳಾದ ಅಮೇರಿಕಾ ಹಾಗೂ ಬ್ರಿಟನ್‍ಗಳಲ್ಲಿ ಒಂದೇ ಕ್ಷಣದಲ್ಲಿ ವ್ಯಕ್ತಿಗೆ ಸೋಂಕು ಇದೆಯೋ, ಇಲ್ಲವೋ ಎಂಬುದನ್ನು ದೃಡಪಡಿಸಲು ಪ್ರಯತ್ನಗಳು ಆಗುತ್ತಿವೆ. ಈ ದೃಢೀಕರಣ ಪರೀಕ್ಷೆಯನ್ನು ಮಾಡಲು ಯಾವ ವೈದ್ಯರೂ ಅಥವಾ ಯಾವುದೇ ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಯೋಜನೆ ಇಲ್ಲ, ಆದರೆ ಶ್ವಾನದಳವನ್ನು ಬಳಸಿ ಕೊರೊನಾ ಸೋಂಕಿತ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯಕ್ಕೆ ಅಮೆರಿಕಾದ ‘ಪೆನ್ಸಿಲ್‍ವೇನಿಯಾ ವಿಶ್ವವಿದ್ಯಾಲಯ’ ಹಾಗೂ ಬ್ರಿಟನ್ ದೇಶದ ‘ಲಂಡನ್ ಸ್ಕೂಲ್ ಆಫ್ ಹೈಜೀನ್’ನ ವಿಜ್ಞಾನಿಗಳು ಮುಂದಾಗಿದ್ದಾರೆ. 8 ಲ್ಯಾಬ್ರಡಾರ್ ನಾಯಿಗಳು ಈ ನಿಟ್ಟಿನಲ್ಲಿ ತರಬೇತಿ ಪಡೆಯುತ್ತಿವೆ.

(ಮೊದಲ ಪುಟದಿಂದ) ಶ್ವಾನ ದಳದವನ್ನು ಗಾಂಜಾ, ಸ್ಫೋಟಕ ವಸ್ತುಗಳು ಹಾಗೂ ಇತರ ಅಕ್ರಮ ವಸ್ತುಗಳ ಪತ್ತೆಗಾಗಿ ಬಳಸಲಾಗುತ್ತದೆ. ಈ ಶ್ವಾನಗಳಿಗೆ ಚಿಕ್ಕ ವಯಸ್ಸಿನಿಂದಲೇ ಈ ಅಕ್ರಮ ಪದಾರ್ಥಗಳ ವಾಸನೆಯನ್ನು ನೀಡಿ ಅಭ್ಯಸಿಸಿ, ಈ ರೀತಿಯ ವಾಸನೆಯುಳ್ಳ ವ್ಯಕ್ತಿಯನ್ನು; ಅಂದರೆ, ಈ ಪದಾರ್ಥಗಳನ್ನು ಹೊರುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಉಪಯೋಗಿಸಲಾಗುತ್ತದೆ.

ಮುಖ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಈ ಶ್ವಾನದಳದ ಕಾರ್ಯ, ಜವಾಬ್ದಾರಿ ಹೆಚ್ಚಿರುತ್ತದೆ. ಇದೀಗ ಈ 8 ಆಯ್ಕೆಯಾದ ಶ್ವಾನಗಳಿಗೆ ‘ಕೋವಿಡ್-19 ಪಾಸಿಟಿವ್’ ಇರುವ ಮಾದರಿಗಳ ವಾಸನೆಯನ್ನು ನೀಡಿ, ಅವುಗಳನ್ನು ಗ್ರಹಿಸುವಂತೆ ತರಬೇತಿ ನೀಡಲಾಗುತ್ತಿದೆ.

ವಿಜ್ಞಾನಿಗಳ ಪ್ರಕಾರ ಪ್ರತೀ ವೈರಾಣುವಿಗೆ ಅದರದ್ದೇ ಆದ ವಾಸನೆ ಇರುತ್ತದೆ. ನಾಯಿಗಳು ಈ ವಾಸನೆಯನ್ನು ಗ್ರಹಿಸುವಲ್ಲಿ ಪರಿಣಿತರಾದರೆ, ಪ್ರಾಯೋಗಿಕವಾಗಿ ವಿಶ್ವದಾದ್ಯಂತ ವಿಮಾನ ನಿಲ್ದಾಣ ಹಾಗೂ ಬಂದರುಗಳ ಮೂಲಕ ಆಗಮಿಸುವ ಪ್ರವಾಸಿಗರ ತಪಾಸಣೆ ಮಾಡುವಲ್ಲಿ ಬಳಸಲಾಗುವುದು. ಪ್ರತೀ ನಾಯಿಯು 1 ಗಂಟೆಗೆ 250 ಜನರ ತಪಾಸಣೆ ಮಾಡುವ ಸಾಮಥ್ರ್ಯ ಹೊಂದಿದೆ. ಪ್ರಾಯೋಗಿಕವಾಗಿ ಯಶಸ್ಸಾದರೆ ಅತಿವೇಗವಾಗಿ ಕೋವಿಡ್ ಪರೀಕ್ಷೆ ಮಾಡುವಲ್ಲಿ ಸಹಾಯವಾಗಲಿದೆ.