ಗೋಣಿಕೊಪ್ಪಲು, ಮೇ 3: ಕಾಡಾನೆಗಳು ಅರಣ್ಯದಿಂದ ಹೊರಗೆ ಬರದಿರಲಿ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ನಿರ್ಮಿಸಿರುವ ರೈಲ್ವೆ ಕಂಬಿ ಗೇಟ್ ಅನ್ನು ಕಾಡಾನೆಗಳೇ ಮುರಿದು ಹಾಕಿರುವ ಘಟನೆ ತಿತಿಮತಿ ಸಮೀಪದ ಜಂಗಲ್ ಹಾಡಿಯಲ್ಲಿ ಜರುಗಿದೆ.ಅರಣ್ಯದೊಳಗಿರುವ ಜನರ ಓಡಾಟಕ್ಕೆ ಅನುಕೂಲವಾಗಲಿ ಎಂದು ಹಾಡಿ ಹಾದಿಗೆ ರೈಲ್ವೆ ಕಂಬಿಯಿಂದಲೇ ಗೇಟ್ ಅಳವಡಿಸಲಾಗಿತ್ತು. ಶನಿವಾರ ರಾತ್ರಿ ಗೇಟ್ ಬಳಿಗೆ ಬಂದಿರುವ ಕಾಡಾನೆಗಳ ಹಿಂಡು ಗೇಟ್‍ಗೆ ಆಧಾರವಾಗಿ ನಿಲ್ಲಿಸಿದ್ದ ರೈಲ್ವೆ ಕಂಬಿಯನ್ನು ಮುರಿದು ಗೇಟ್ ಅನ್ನು ಒದ್ದು ದೂರ ಎಸೆದಿವೆ. ಇದೀಗ ಎತ್ತಲಾರದ ಸ್ಥಿತಿಯಲ್ಲಿ ಭಾರಿ ಪ್ರಮಾಣದ ಗೇಟ್ ರಸ್ತೆಯಲ್ಲೇ ಬಿದ್ದಿದೆ. ಆನೆಗಳು ಗೇಟ್ ಒಳಗೆ ನುಗ್ಗಿ ಕಾಫಿ ತೋಟದತ್ತ ಸರಾಗವಾಗಿ ಬರುತ್ತಿವೆ.ಕಾಡಾನೆಗಳು ನಿರಂತರವಾಗಿ ಓಡಾಡುತ್ತಿದ್ದ ಚೆಕ್ಕೇರ ಕಾಫಿ ತೋಟ ಚಾಮುಂಡಿ ಮೂಲೆಯಿಂದ ಜಂಗಲ್ ಹಾಡಿ ಕುಂಜಿ ರಾಮನ ಕೆರೆ ವರೆಗೆ 2.8 ಕಿಮೀ ದೂರ ಒಂದು ವರ್ಷದ ಹಿಂದೆ ರೈಲ್ವೆ ಕಂಬಿ ನಿರ್ಮಿಸಲಾಗಿದೆ. ಅರಣ್ಯದೊಳಗೆ ನೂರಾರು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಬುಡಕಟ್ಟು ಜನರ ಓಡಾಟಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಾಡಿ ಹಾದಿಯಲ್ಲಿ ಗೇಟ್ ಅಳವಡಿಸಲಾಗಿತ್ತು. ಈ ಗೇಟ್‍ಗೆ ಸಂಜೆ ಅರಣ್ಯ ಇಲಾಖೆಯವರು ಬೀಗ ಹಾಕುತ್ತಿದ್ದರು. ಬೆಳಿಗ್ಗೆ 7 ಗಂಟೆಗೆ ಬಂದು ತೆರೆಯುತ್ತಿದ್ದರು.ರೈಲ್ವೆ ಕಂಬಿ ನಿರ್ಮಾಣದಿಂದ ಆನೆಗಳು ಕಾಫಿ ತೋಟದತ್ತ ಬರುವುದಕ್ಕೆ ತುಸು ತೊಡಕಾಗಿತ್ತು. ಇದನ್ನು ಅರಿತ ಕಾಡಾನೆಗಳು ಆಕ್ರೋಶಗೊಂಡು ಈಗ ಗೇಟ್ ಅನ್ನೇ ಒದ್ದು ಬೀಳಿಸಿವೆ.

ಕಳಪೆ ಕಾಮಗಾರಿ : ಈ ಬಗ್ಗೆ ಮಾತನಾಡಿದ ನೊಕ್ಯದ ಕಾಫಿ ಬೆಳೆಗಾರ ಹಾಗೂ ಜಿಲ್ಲಾ ರೈತ ಸಂಘದ ಪದಾಧಿಕಾರಿ ಚೆಪ್ಪುಡೀರ ಕಾರ್ಯಪ್ಪ 2019 ಜನವರಿಯಲ್ಲಿ ಕೇಂದ್ರ

(ಮೊದಲ ಪುಟದಿಂದ) ಸರ್ಕಾರದ ಸೂಚನೆಯಂತೆ ಕಾಡಾನೆಗಳನ್ನು ನಿಯಂತ್ರಿಸಲು ರೈಲ್ವೆ ಕಂಬಿಯ ಬ್ಯಾರಿಕೇಡ್ ನಿರ್ಮಿಸ ಲಾಯಿತು. ಈ ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟ ದ್ದಾಗಿದೆ.

ಕಾಮಗಾರಿ ನಡೆಯುವಾಗಲೇ ಕಳಪೆ ಗುಣಮಟ್ಟದ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ಈ ಯೋಜನೆ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಅರಣ್ಯಾಧಿಕಾರಿ ಸ್ಪಷ್ಟನೆ: ಈ ಬಗ್ಗೆ ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್ ಪ್ರತಿಕ್ರಿಯಿಸಿ ತಜ್ಞರಿಂದ ಪರಿಶೀಲನೆ ನಡೆದು ಅನುಮೋದನೆಗೊಂಡ ಬಳಿಕ ಕಾಮಗಾರಿ ಆರಂಭಿಸ ಲಾಯಿತು. ಬಳಸಿರುವ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಬಾಹ್ಯ ತಜ್ಞರಿಂದಲೂ ಪರಿಶೀಲನೆ ನಡೆದಿದೆ. ಕಾಮಗಾರಿ ಮತ್ತು ವಸ್ತುಗಳೆಲ್ಲವೂ ಗುಣಮಟ್ಟದಿಂದಲೇ ಕೂಡಿದೆ. ಭಾರೀ ಗಾತ್ರದ ಐದಾರು ಆನೆಗಳು ಒಟ್ಟಿಗೆ ಸೇರಿ ನೂಕಿದಾಗ ಕಂಬಿಗಳ ಬೆಸುಗೆ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ ಎಂದರು.

- ಎನ್.ಎನ್.ದಿನೇಶ್