ಮಡಿಕೇರಿ, ಮೇ 3: ಉತ್ತರ ಕೊಡಗಿನ ಗಡಿಭಾಗದ ಕೊಡ್ಲಿಪೇಟೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದಿಂದ ಕೈಗೊಳ್ಳಲು ಉದ್ದೇಶಿಸಿರುವ 66/11 ಕೆವಿ ವಿದ್ಯುತ್ ಶೇಖರಣಾ ಘಟಕಕ್ಕೆ ಭೂ ಮಂಜೂರಾತಿಯೊಂದಿಗೆ ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಭರವಸೆ ನೀಡಿದರು.

ಇಂದು ಕೊಡ್ಲಿಪೇಟೆ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭ ಅವರು, ಅಲ್ಲಿನ ಜನತೆಯ ಕೋರಿಕೆಗೆ ಸ್ಪಂದಿಸಿ ಮಾತನಾಡುತ್ತಿದ್ದರು.ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ರೋಹಿಣಿ ಸುಬ್ರಮಣ್ಯಾಚಾರ್, ಚೆಸ್ಕಾಂ ಸಹಾಯಕ ಕಿರಿಯ ಅಭಿಯಂತರ ಮನುಕುಮಾರ್ ಹಾಗೂ ಅಲ್ಲಿನ ಹಿರಿಯರಾದ ನಾಗರಾಜ್, ಯತೀಶ್ ಕುಮಾರ್, ಭಗವಾನ್ ಇನ್ನಿತರರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಮೇಲ್ಮನೆ ಸದಸ್ಯರು ತಕ್ಷಣ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರುಗಳೊಂದಿಗೆ ಚರ್ಚಿಸಿದರು.

ಕೊಡ್ಲಿಪೇಟೆ ಗ್ರಾ.ಪಂ. ವ್ಯಾಪ್ತಿಯ ಕಲ್ಲಳ್ಳಿಯಲ್ಲಿ ಈ ಸಂಬಂಧ ಚೆಸ್ಕಾಂನಿಂದ ಗುರುತಿಸಿರುವ 1.5 ಎಕರೆ ಜಾಗ ಮಂಜೂರಾತಿಗೆ ಸಲಹೆ ನೀಡಿದರು.

ಅಲ್ಲದೆ ಈ ಯೋಜನೆಗೆ ಅನೇಕ ವರ್ಷಗಳ ಪ್ರಯತ್ನದೊಂದಿಗೆ ಸರಕಾರದಿಂದ ರೂ. 11.5 ಕೋಟಿ ಹಣ ಮಂಜೂರಾಗಿದ್ದು, ತಕ್ಷಣ ಜಾಗ ಒದಗಿಸಿದರೆ ಚೆಸ್ಕಾಂನಿಂದ ಕಾಮಗಾರಿಯೊಂದಿಗೆ ಯೋಜನೆ ಅನುಷ್ಠಾನಕ್ಕೆ ಚಾಲನೆ ದೊರಕಲಿದೆ ಎಂದು ಅವರು ಅಧಿಕಾರಿಗಳಿಗೆ ನೆನಪಿಸಿದರು. ಪೂರಕ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ಗ್ರಾ.ಪಂ.ನಿಂದ ನಿರಾಪೇಕ್ಷಣಾ ಪತ್ರದೊಂದಿಗೆ ಕಂದಾಯ ಇಲಾಖೆ ಜಾಗವನ್ನು ಒದಗಿಸುವುದಾಗಿ ಭರವಸೆ ನೀಡಿದರು.

(ಮೊದಲ ಪುಟದಿಂದ)

ಗ್ರಾ.ಪಂ.ಗಳಿಗೆ ಸಲಹೆ: ಈ ಮುನ್ನ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಬ್ಯಾಡಗೊಟ್ಟ, ಶನಿವಾರಸಂತೆ, ದುಂಡಳ್ಳಿ, ಕೊಡ್ಲಿಪೇಟೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಮತ್ತು ಆಯಾ ಪಂಚಾಯಿತಿ ಅಧ್ಯಕ್ಷರುಗಳು ಭೇಟಿ ಮಾಡಿದ ಮೇಲ್ಮನೆ ಸದಸ್ಯರು, ತ್ವರಿತವಾಗಿ ಮಳೆಗಾಲಕ್ಕೆ ಮುನ್ನ ಕಾಮಗಾರಿಗಳಿಗೆ ಒತ್ತು ನೀಡಬೇಕೆಂದು ತಿಳಿ ಹೇಳಿದರು.

ಅಲ್ಲದೆ ಕೊರೊನಾ ಸೋಂಕಿನ ನಿರ್ಬಂಧ ನಡುವೆ ದುಡಿಯುವ ವರ್ಗ ಹಾಗೂ ಬಡ ಕೂಲಿ ಕಾರ್ಮಿಕರಿಗೆ, ಹಸಿವು ಸಮಸ್ಯೆ ಉಂಟಾಗದಂತೆ ಸಕಾಲದಲ್ಲಿ ಆಹಾರದ ಕಿಟ್‍ಗಳನ್ನು ಪೂರೈಸಬೇಕೆಂದು ನೆನಪಿಸಿದರು. ಈ ಸಂಬಂಧ ಸಮಸ್ಯೆಗಳಿದ್ದರೆ, ಆಯಾ ತಾ.ಪಂ. ಉಸ್ತುವಾರಿ ಅಧಿಕಾರಿ ಮುಖಾಂತರ ಜಿಲ್ಲಾಡಳಿತಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಿ, ಉಚಿತ ಆಹಾರ ಕಿಟ್ ವಿತರಿಸಲು ಗಮನ ಹರಿಸಬೇಕೆಂದು ಗಮನ ಸೆಳೆದರು.

ಈ ಸಂದರ್ಭ ಸೋಮವಾರ ಪೇಟೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್, ದುಂಡಳ್ಳಿ ಅಧ್ಯಕ್ಷ ಗಿರೀಶ್, ಇತರ ಪ್ರಮುಖರು ಪಾಲ್ಗೊಂಡಿದ್ದರು.