ಸಿದ್ದಾಪುರ, ಮೇ 3: ಕಳೆದ ಒಂದು ವಾರಗಳಿಂದ ಕುಡಿಯುವ ನೀರು ಸರಬರಾಜು ಮಾಡದ ಪರಿಣಾಮ ಗ್ರಾಮಸ್ಥರು ಪರದಾಡು ವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದಲ್ಲಿ ಮೋಟಾರ್ ದುರಸ್ತಿ ಆಗಿರುವುದರಿಂದ ಕಳೆದ 7 ದಿನಗಳಿಂದ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ವಾರ ಕಳೆದರೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿಲ್ಲ ಎಂದು ಗ್ರಾಮಸ್ಥರು ಗ್ರಾ.ಪಂ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಗ್ರಾಮದ ಕೆಲವು ಕುಟುಂಬಗಳು ಪಕ್ಕದ ಗ್ರಾಮದ ತಮ್ಮ ಕುಟುಂಬಸ್ಥರ ಮನೆಗಳಿಗೆ ತೆರಳಿರುವ ಪ್ರಸಂಗ ಕೂಡ ನಡೆದಿದೆ. ಮಹಿಳೆಯರು, ವೃದ್ಧರು, ಮಕ್ಕಳು ಕಾವೇರಿ ನದಿಯಿಂದ ಕಾಲ್ನಡಿಗೆಯಲ್ಲಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಕೆಲವು ಭಾಗಗಳಲ್ಲಿ ವಾರ್ಡಿನ ಕೆಲವು ಸದಸ್ಯರು ಟ್ಯಾಂಕರ್ ಮೂಲಕ ತಾತ್ಕಾಲಿಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದ್ದಾರೆ.

ಟ್ರಾನ್ಸ್‍ಫಾರ್ಮರ್ ಹಾಳಾಗಿದ್ದ ರಿಂದ ಹೊಸ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿತ್ತು. ಆದರೆ ಇದರ ಬಳಿಕ ಮೋಟಾರ್ ಹಾಳಾಯಿತು. ಇದರಿಂದಾಗಿ ಸಮಸ್ಯೆಯಾಗಿತ್ತು. ಇದೀಗ ಎಲ್ಲವೂ ಸರಿಯಾಗಿದ್ದು ಕೂಡಲೇ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿರುವುದಾಗಿ ಪಿಡಿಓ ವಿಶ್ವನಾಥ್ ತಿಳಿಸಿದ್ದಾರೆ.