ಸುಂಟಿಕೊಪ್ಪ, ಮೇ 2: ಕಾಫಿ ತೋಟದ ಕಾರ್ಮಿಕರಿಗೆ ವೇತನ ನೀಡುವುದಾಗಿ ಬ್ಯಾಂಕಿನಿಂದ ಹಣ ಪಡೆದುಕೊಂಡು ಸ್ಕೂಟಿಯಲ್ಲಿ ತೆರಳುತ್ತಿದ್ದ ತೋಟದ ವ್ಯವಸ್ಥಾಪಕರ ಮೇಲೆ ಆಗಂತುಕರು ಹಲ್ಲೆ ನಡೆಸಿ ಕೈ ಕಾಲುಗಳನ್ನು ಕಟ್ಟಿ ಹಾಕಿ ಹಣ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.ಸುಂಟಿಕೊಪ್ಪ ಕೆನರಾ ಬ್ಯಾಂಕಿ ನಿಂದ ಶನಿವಾರ ಬೆಳಿಗ್ಗೆ ಹರದೂರು ಗುಂಡುಕುಟ್ಟಿ ತೋಟದ ಮಾಲೀಕ ದಿವಂಗತ ಜಿ.ಎಂ. ಮಹೇಂದ್ರ ಅವರ ಎಸ್ಟೇಟಿನ ವ್ಯವಸ್ಥಾಪಕ ವಿಜಯ ಕುಮಾರ್ ಅವರು ರೂ. 5 ಲಕ್ಷದ 18 ಸಾವಿರ ನಗದನ್ನು ಡ್ರಾ ಮಾಡಿಕೊಂಡು (ಮೊದಲ ಪುಟದಿಂದ) ಸುಜುಕಿ ಎಕ್ಸೆಸ್ ಸ್ಕೂಟಿಯಲ್ಲಿ ತೋಟಕ್ಕೆ ತೆರಳುತ್ತಿದ್ದಾಗ ಸುಂಟಿಕೊಪ್ಪ ಮಾದಾಪುರ ರಸ್ತೆಯಲ್ಲಿ ಹರದೂರು ತೋಟದ ಪ್ರಧಾನ ವ್ಯವಸ್ಥಾಪಕ ಕರ್ನಲ್ ಕುಮಾರ್ ಅವರ ತೋಟಕ್ಕೆ ತೆರಳುವ ಗೇಟಿನ ಮುಂಭಾಗದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದೊಂದಿಗೆ ನಿಂತಿದ್ದರು ಎನ್ನಲಾಗಿದೆ. ಇದೇ ವೇಳೆ ಅಲ್ಲಿಗೆ ಆಗಮಿಸಿದ ವಿಜಯಕುಮಾರ್ ಬಳಿ ನಾವುಗಳು ಕರ್ನಲ್ ಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದು, ಅವರ ಮನೆಯನ್ನು ತೋರಿಸಿಕೊಡುವಿರ ಎಂದು ಕೇಳಿದರು ಎನ್ನಲಾಗಿದೆ. ಈ ವೇಳೆ ವ್ಯವಸ್ಥಾಪಕ ವಿಜಯ್‍ಕುಮಾರ್ ತನ್ನ ಹಿಂದೆ ಬರುವಂತೆ ಸೂಚಿಸಿ ಮುಂದೆ ಸಾಗುತ್ತಿದ್ದಾಗ ಆಗಂತುಕರು ತೋಟದ ದಾರಿ ಮಧ್ಯೆ ಏಕಾಏಕಿ ಹಿಂದಿನಿಂದ ಹಲ್ಲೆ ನಡೆಸಿ, ಮಾರಕಾಯುಧ ತೋರಿಸಿ ಹಗ್ಗದಿಂದ ಕಟ್ಟಿ ಹಾಕಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ವಿಜಯಕುಮಾರ್ ಬಳಿ ಇದ್ದ ರೂ. 5 ಲಕ್ಷದ 18 ಸಾವಿರ ಹಣವನ್ನು ದರೋಡೆಗೈದು ಪರಾರಿಯಾಗಿದ್ದಾರೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯಿಂದ ನಿತ್ರಾಣಗೊಂಡಿದ್ದ ವಿಜಯ್‍ಕುಮಾರ್ ಅವರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಡಿವೈಎಸ್‍ಪಿ ಶೈಲೇಂದ್ರ, ವೃತ್ತ ನೀರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಅಪರಾಧ ಪತ್ತೆ ವಿಭಾಗದ ಶ್ವಾನದಳ ಸ್ಥಳ ಪರಿಶೀಲನೆ ನಡೆಸಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.