ಕಣಿವೆ, ಮೇ 3: ಈ ಕೊರೊನಾ ನಗರ ಪಟ್ಟಣ ಪ್ರದೇಶಗಳ ಜನರನ್ನೇನೋ ಮನೆಯಲ್ಲಿ ಕೂರಿಸಿತು. ಆದರೆ ಕೊರೊನಾ ಅಲ್ಲ, ಯಾವ ರೋಗ ಬಾಧೆಗೂ ಅಂಜದೇ, ಯಾವ ಲಾಕ್‍ಡೌನ್‍ಗೂ ಲಾಕ್ ಆಗದೇ ತಮ್ಮಷ್ಟ್ಟಕ್ಕೆ ತಾವು ವಿವಿಧ ಬೆಳೆ ಬೆಳೆಯುವಲ್ಲಿ ತಲ್ಲೀನರಾದ ಕೃಷಿಕರಿಗೆ ಬೆಲೆ ಇಳಿಕೆ ಭಾರೀ ಆಘಾತವನ್ನೇ ಉಂಟು ಮಾಡಿದೆ.
ಹಾಸನ ಜಿಲ್ಲೆಯಲ್ಲಿ ಅಲ್ಲಿನ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜಿಲ್ಲೆಯ ಕೃಷಿಕರು ಬೆಳೆದ ಬೆಳೆಗಳನ್ನು ಖರೀದಿಸಿ ಹಾಲು ಉತ್ಪಾದಕ ಸಂಘಗಳ ಮೂಲಕ ಜನಸಾಮಾನ್ಯರಿಗೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನು ಅತ್ತ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಬಡ ವರ್ಗದ ಜನರಿಗೆ ವಿತರಿಸಿ ಉದಾರತೆ ಮೆರೆದು ಸಹಕರಿಸಿ ಎಂದಿದ್ದರು. ಆದರೆ, ರೈತ ಮಾತ್ರ ಸಾಲ-ಸೋಲ ಮಾಡಿ ಬೆಳೆದ ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ಪರದಾಟ ನಡೆಸುವುದು ಮಾತ್ರ ತಪ್ಪಲಿಲ್ಲ. ಕುಶಾಲನಗರ ಸಮೀಪದ ಕಾವೇರಿ ನದಿ ದಂಡೆಯ ಚಿಕ್ಕಹೊಸೂರು ಗ್ರಾಮದ ಕೃಷಿಕ ಜಗದೀಶ್, ಸಿ.ಸಿ. ರೇಣುಕಾ, ಹೆಚ್.ವಿ. ಶಿವಪ್ಪ ಮೊದಲಾದವರು ತಮ್ಮ ಜಮೀನಿನಲ್ಲಿ ಬೆಳೆದ ಕುಂಬಳಕಾಯಿ ಬೆಳೆಯನ್ನು ಖರೀದಿಸುವವರು ಯಾರು ಇಲ್ಲದ ಕಾರಣ ಮನೆಯಂಗಳದಲ್ಲೇ ದಾಸ್ತಾನು ಇರಿಸಿ ಲಾಕ್‍ಡೌನ್ ತೆರವನ್ನು ಕಾಯುತ್ತಿ ದ್ದಾರೆ. ದೇವಾಲಯಗಳಿಗೆ ಉಚಿತವಾಗಿ ಕಳಿಸೋಣ ಎಂದರೆ ದೇವಾಲಯ ಗಳು ಬಂದ್ ಆಗಿವೆ. ಕೊಳ್ಳುವವರು ಇಲ್ಲ. ಏನು ಮಾಡೋದು ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಸರ್ಕಾರದ ಬೆಂಬಲ ಬೆಲೆಯಲ್ಲಿ ಕುಂಬಳಕಾಯಿ ಖರೀದಿಸಿ ರೈತರಿಗೆ ನೆರವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.