ಮಡಿಕೇರಿ, ಮೇ 2: ಕೊಡಗು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದೊಂದಿಗೆ ಜನಜಂಗುಳಿ ತಪ್ಪಿಸುವ ಮೂಲಕ, ವ್ಯವಸ್ಥಿತ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುವಂತೆ, ಈ ಹಿಂದಿನಂತೆ ಆಯ ವಾರದ ಸಂತೆ ಏರ್ಪಡಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಲಾಗಿದೆ.

ಈ ಸಂಬಂಧ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಡಿ. ಮಂಜುನಾಥ್, ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಮನ್ಯುಕುಮಾರ್, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ನಗರ ಪ್ರಮುಖ ಜಿ. ಸೋಮೇಶ್ ಅವರುಗಳು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಗಮನ ಸೆಳೆದರು.

ಇಂದು ಸೋಮವಾರಪೇಟೆಯಲ್ಲಿ ಭೇಟಿಯ ಸಂದರ್ಭ ಪ್ರತಿಕ್ರಿಯಿಸಿದ ಮೇಲ್ಮನೆ ಸದಸ್ಯರು, ತಾವು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗ ಳೊಂದಿಗೆ ಮತ್ತು ಜಿಲ್ಲೆಯ ಶಾಸಕರುಗಳೊಂದಿಗೆ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಪ್ರಮುಖರು ಕೊಡಗಿನಲ್ಲಿ ವಾರದ ಏಳು ದಿವಸ ಬೇರೆ ಬೇರೆ ಕಡೆಗಳಲ್ಲಿ, ವಾರವೊಂದಕ್ಕೆ ಕೇವಲ 1 ದಿವಸ ಸಂತೆ ವ್ಯಾಪಾರವಿದ್ದು, ಆಯಾ ಭಾಗದ ಜನತೆ ಈ ಸಂತೆ ನಡೆಸಿಕೊಂಡು ನೆಮ್ಮದಿಯಾಗಿದ್ದಾರೆ. ಈಗ ವಾರಕ್ಕೆ ನಾಲ್ಕು ಬಾರಿ ಸಂತೆಯಿಂದ ಗೊಂದಲದೊಂದಿಗೆ ಮಾಮೂಲಿ ವರ್ತಕರು ಮತ್ತು ತರಕಾರಿ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದರು.

ಅಲ್ಲದೆ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಹಾಗೂ ಮುಖ್ಯ ಪಟ್ಟಣಗಳು, ಗ್ರಾ.ಪಂ. ಕೇಂದ್ರಗಳಲ್ಲಿ ವಾರದ ಸಂತೆಯಿಂದ ಎಲ್ಲರೂ ನೆಮ್ಮದಿಯೊಂದಿಗೆ ಕೊರೊನಾ ಭಯ ರಹಿತ ಬದುಕು ಕಂಡುಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಈ ಸಲಹೆಯನ್ನು ಜಿಲ್ಲಾಡಳಿತದ ಸಭೆಯಲ್ಲಿ ಚರ್ಚಿಸಿ ಸೂಕ್ತ ಗಮನ ಸೆಳೆಯುವುದಾಗಿ ಸುನಿಲ್ ಸುಬ್ರಮಣಿ ಭರವಸೆಯಿತ್ತರು.