ಶನಿವಾರಸಂತೆ, ಮೇ 2: ಶನಿವಾರಸಂತೆಯ ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದುಂಡಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ದೊರೆತ ಖಚಿತ ವರ್ತಮಾನದ ಮೇರೆ ತನ್ನ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮರಳು ತುಂಬಿದ ಲಾರಿ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ. 30 ರಂದು ಬೆಳಗ್ಗಿನ ಜಾವ ಗಸ್ತಿನಲ್ಲಿದ್ದ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ದೊರೆತ ಖಚಿತ ವರ್ತಮಾನದ ಮೇರೆ ದುಂಡಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯಲ್ಲಿ ಬೆಳಗ್ಗಿನ ಜಾವ ಲಾರಿ (ಕೆಎ 35 ಎ 6246)ರಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಾಟ ಮಾಡುತ್ತಿರುವಾಗ ತನ್ನ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಮರಳು ತುಂಬಿದ ಲಾರಿ ಹಾಗೂ ಆರೋಪಿಗಳಾದ ಹಾಲ್ಕೆನೆ ಗ್ರಾಮದ ಅಭಿಷೇಕ್ ಹಾಗೂ ಗುಂಡೂರಾವ್ ಬಡಾವಣೆಯ ಆಸೀಫ್ ಅವರುಗಳನ್ನು ಬಂಧಿಸಿ ಶನಿವಾರಸಂತೆ ಪೊಲೀಸ್ ಠಾಣೆಗೆ ಒಪ್ಪಿಸಿರುತ್ತಾರೆ.
ಠಾಣೆಯ ಹೆಡ್‍ಕಾನ್ಸ್‍ಟೇಬಲ್ ರವಿಚಂದ್ರ ಲಾರಿ ಹಾಗೂ ಆರೋಪಿ ಗಳನ್ನು ವಶಪಡಿಸಿಕೊಂಡು ಕಾಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.