ಭಾಗಮಂಡಲ, ಏ. 29: ಶಂಖಜಾಗಟೆಯ ಸದ್ದು, ಅರ್ಚಕರ ಮಂತ್ರಘೋಷ,ಭಕ್ತರ ಕಲರವ ನಿತ್ಯ ಕೇಳಿಬರುತ್ತಿದ್ದ ಕೊಡಗಿನ ಪವಿತ್ರತಾಣ ತಲಕಾವೇರಿ ಸ್ತಬ್ಧವಾಗಿದೆ. ಅರ್ಚನೆ, ಮಂಗಳಾರತಿ, ಪೂಜೆ, ಪ್ರಾರ್ಥನೆ ನಡೆಯುತ್ತಿದ್ದರೂ ತೀರ್ಥ ಪ್ರಸಾದ ತೆಗೆದುಕೊಳ್ಳಲು ಭಕ್ತರಿಲ್ಲ. ಭಕ್ತ ಸಮೂಹದಿಂದ ಗಿಜಿಗುಡುತ್ತಿದ್ದ ಕಾವೇರಿ ಕ್ಷೇತ್ರದಲ್ಲಿ ನೀರವ ಮೌನ ನೆಲೆಸಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಚಾರ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು ಭಕ್ತರು ಪವಿತ್ರತಾಣದತ್ತ ಸುಳಿಯುತ್ತಲೇ ಇಲ್ಲ. ಪ್ರಕೃತಿ ನಡುವಿನ ತಾಣ ನಿಶ್ಶಬ್ಧವಾಗಿದೆ.ಇಂತಹ ತಾಣದಲ್ಲಿ ಮಂಗಳವಾರ ಕರುವಿನ ಕರೆಯೊಂದು ಕೇಳಿಬರುತಿತ್ತು. ತಲಕಾವೇರಿಯ ತಾಣದೊಳಗೆ ತೆರಳಿದ್ದ ಕರು ಗೇಟಿನಿಂದ ಹೊರಬರಲಾರದೆ ಕಂಗೆಟ್ಟಿದ್ದರೆ ಇತ್ತ ಗೇಟಿನ ಹೊರಗಡೆ ಹಸು ತನ್ನ ಕರುವಿಗಾಗಿ ಹಂಬಲಿಸು ತ್ತಿತ್ತು. ನಿತ್ಯಪೂಜೆ ನಡೆಸುತ್ತಿದ್ದ ಅರ್ಚಕವೃಂದ ದೇವಾಲಯದಲ್ಲಿ ಪೂಜೆ ನಡೆಸುತ್ತಿದ್ದರು. ಇತ್ತ ಮುಖ್ಯದ್ವಾರದ ಗೇಟಿನಲ್ಲಿ ಭಕ್ತರಿಗೆ ಪ್ರವೇಶವಿಲ್ಲ ಎಂಬ ಸೂಚನಾ ಫಲಕ ಹಾಕಲಾಗಿತ್ತು. ಗೇಟ್ ಒಳಗೆ ನಾನೂ ಪ್ರವೇಶಿಸಬಾರದೇ ಎಂದು ದೈನ್ಯತೆಯಿಂದ ಕೇಳುತ್ತಿರುವಂತೆ ಹಸು ನಿಂತಿತ್ತು. ಹಸುಕರುವನ್ನು ಒಟ್ಟುಗೂಡಿ ಸುವ ಕಾರ್ಯಕ್ಕೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ದೂರವಾಣಿ ಕರೆ ಮೂಲಕ ‘ಶಕ್ತಿ’ ಪ್ರತಿನಿಧಿಯಿಂದ ಮಾಹಿತಿ ನೀಡಲಾ ಯಿತು. - ಸುನಿಲ್ ಕುಯ್ಯಮುಡಿ