ಸೋಮವಾರಪೇಟೆ, ಏ. 29: ಸಮೀಪದ ತೋಳೂರುಶೆಟ್ಟಳ್ಳಿ ಅಂಚೆ ಕಚೇರಿಯಲ್ಲಿ ಸರ್ಕಾರದ ವಿವಿಧ ಮಾಸಾಶನ ಪಡೆಯಲು ವೃದ್ಧರು ಸರತಿ ಸಾಲಿನಲ್ಲಿ ನಿಂತರೂ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಲಾಕ್‍ಡೌನ್ ಇರುವ ಪ್ರಸ್ತುತ ಸಂದರ್ಭದಲ್ಲಿ ಕೆಲಸವೂ ಇಲ್ಲದೇ ಹಣಕ್ಕಾಗಿ ಪರದಾಟ ನಡೆಯುತ್ತಿದೆ. ವೃದ್ದರಿಗೆ ಸರ್ಕಾರದಿಂದ ಬರುವ ಅಲ್ಪಪ್ರಮಾಣದ ಹಣವೇ ಜೀವನಕ್ಕೆ ಆಧಾರವಾಗಿರುವ ಪ್ರಸ್ತುತತೆಯಲ್ಲಿ, ತೋಳೂರುಶೆಟ್ಟಳ್ಳಿ ಅಂಚೆ ಕಚೇರಿಯಿಂದ ಹಣ ಪಡೆಯಲು ಕನಿಷ್ಟ ಮೂರ್ನಾಲ್ಕು ದಿನ ತಿರುಗ ಬೇಕಾಗಿದೆ ಎಂದು ಹಲವಷ್ಟು ಮಂದಿ ಅಳಲು ತೋಡಿಕೊಂಡಿದ್ದಾರೆ.

ಇಲ್ಲಿನ ಅಂಚೆಪೇದೆ ಸಮಯ ಪಾಲನೆ ಮಾಡುತ್ತಿಲ್ಲ. ಬೆಳಿಗ್ಗೆ ತಡವಾಗಿ ಕಚೇರಿಗೆ ಬರುವದು ಮತ್ತು ಮಧ್ಯಾಹ್ನ ಬೇಗ ಹಿಂತೆರಳುತ್ತಿದ್ದಾರೆ. ದೂರದ ಗ್ರಾಮೀಣ ಭಾಗದಿಂದ ಮಾಸಾಶನ ಪಡೆಯಲು ಬೆಳಿಗ್ಗೆ 5 ಗಂಟೆಗೆ ಎದ್ದು ನಡೆದುಕೊಂಡೇ ಅಂಚೆ ಕಚೇರಿಗೆ ಆಗಮಿಸುವ ವಯೋವೃದ್ಧರಿಗೆ ಸರಿಯಾಗಿ ಹಣ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕನಿಷ್ಟ ವೃದ್ಧರಿಗೆ ಕುಳಿತುಕೊಳ್ಳಲೂ ಸಹ ಆಸನಗಳ ವ್ಯವಸ್ಥೆ ಮಾಡಿಲ್ಲ. ಒಂದು ದಿನಕ್ಕೆ 10 ರಿಂದ 15 ಮಂದಿಗೆ ಮಾತ್ರ ಹಣ ನೀಡಲಾಗುತ್ತಿದ್ದು, ಉಳಿದವರು ಮಧ್ಯಾಹ್ನದವರೆಗೂ ಸರತಿ ಸಾಲಿನಲ್ಲಿ ನಿಂತು ಬರಿಗೈಯಲ್ಲಿ ವಾಪಸ್ ಹೋಗಬೇಕಾಗಿದೆ. ಕೆಲವರಿಗೆ ಮಾತ್ರ ಟೋಕನ್ ನೀಡಿ, ಉಳಿದವರನ್ನು ನಾಳೆ ಬನ್ನಿ ಎಂದು ಸಾಗ ಹಾಕಲಾಗುತ್ತಿದೆ ಎಂದು ವೃದ್ಧರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಅಂಚೆ ಕಚೇರಿಯಲ್ಲಿ ವಿಮೆ, ಎಸ್.ಬಿ. ಮತ್ತು ಆರ್.ಡಿ. ಖಾತೆಗೆ ಹಣ ಕಟ್ಟಲೂ ಸಹ ಹೆಣಗಾಟ ನಡೆಸಬೇಕಾಗಿದೆ. ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಕಚೇರಿಯಲ್ಲೇ ಇರಬೇಕೆಂಬ ನಿಯಮ ವಿದ್ದರೂ ಇದನ್ನು ಪಾಲಿಸುತ್ತಿಲ್ಲ ಎಂದು ಹಲವಷ್ಟು ಮಂದಿ ದೂರಿದ್ದಾರೆ.

ದೂರದ ಕೂತಿ, ಎಡದಂಟೆ, ದೊಡ್ಡತೋಳೂರು, ಚಿಕ್ಕತೋಳೂರು, ಕಾಡುಮನೆ, ಕಂಬಳ್ಳಿ, ಸಿಂಗನಳ್ಳಿ, ಹರಪಳ್ಳಿ, ವನಗೂರುಕೊಪ್ಪ ಗ್ರಾಮ ಗಳಿಂದಲೂ ವೃದ್ಧರು ಕಾಲ್ನಡಿಗೆ ಯಲ್ಲಿ, ವಿಶೇಷಚೇತನರು ಅಂಚೆ ಕಚೇರಿಗೆ ಬರುತ್ತಾರೆ. ಇಂತಹವ ರೊಂದಿಗೆ ಉಡಾಫೆಯಿಂದ ವರ್ತಿಸದೇ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಇಲಾಖೆಯ ಮೇಲಾಧಿಕಾರಿಗಳು ಕಿವಿಮಾತು ಹೇಳಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.