ಈ ಮಾಹಾಮಾರಿ ಕೊರೊನಾ ತನ್ನ ರೌದ್ರಾವತಾರವನ್ನು ಎಲ್ಲೆಡೆ ಮುಂದುವರಿಸಿದ ಪರಿಣಾಮ ನಾವೆಲ್ಲರೂ ಗೃಹ ಬಂಧನಕ್ಕೆ ಒಳಗಾಗಿದ್ದೇವೆ. ಮೇ. 3 ರವರೆಗೂ ಲಾಕ್‍ಡೌನ್ ಜಾರಿಯಲ್ಲಿದೆ. ನಾವೆಲ್ಲರೂ ಮನೆಯಲ್ಲೇ ಇರಬೇಕಾಗಿದೆ ವಿದ್ಯಾರ್ಥಿಗಳೇ ಮನೆಯಲ್ಲೇ ಇದ್ದು ಈ ಕಿಲ್ಲರ್ ಕೋವಿಡ್-19 ಅನ್ನು ಮಕಾಡೆ ಮಲಗಿಸೋಣ.

ಹತ್ತನೇ ತರಗತಿಯಲ್ಲಿ ವರ್ಷವಿಡೀ ಕಷ್ಟಪಟ್ಟು ಹಗಲಿರುಳು, ಸ್ಪೆಶಲ್ ಕ್ಲಾಸ್, ನೈಟ್ ಕ್ಲಾಸ್, ಇವ್ನಿಂಗ್ ಕ್ಲಾಸ್, ಸಂಡೇ ಕ್ಲಾಸ್, ಹೀಗೆ ಶಿಕ್ಷಕರ ಕೈಯಿಂದ ಪೆಟ್ಟು ತಿಂದು, ಮನೆಯಲ್ಲಿ ಮಧ್ಯರಾತ್ರಿವರೆಗೂ ಕರೆಂಟ್ ಇಲ್ಲದಿದ್ದರೂ ದೀಪ ಹಚ್ಚಿ, ಸೊಳ್ಳೆಕಾಟ ತಾಳಲಾರದೆ, ಕಷ್ಟದಿಂದ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗ ಬೇಕೆಂದು ಅದೆಷ್ಟೋ ವಿದ್ಯಾರ್ಥಿಗಳು ಕನಸು ಕಂಡಿರಬಹುದು ಅಲ್ವಾ ? ಬಹುಶಃ ಶೇಕಡಾ 99% ರಷ್ಟು ಇದೇ ಕನಸಿನಲ್ಲಿ ಓದಿರುತ್ತಾರೆ. ನಮ್ಮ ಶೈಕ್ಷಣಿಕ ಜೀವನದಲ್ಲಿ ಅತೀ ಪ್ರಾಮುಖ್ಯ ಘಟ್ಟವಾಗಿದೆ ಎಸ್.ಎಸ್‍ಎಲ್.ಸಿ.

ಎಸ್.ಎಸ್.ಎಲ್.ಸಿಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣನಾದರೇ, ತನ್ನ ಮುಂದಿನ ಶೈಕ್ಷಣಿಕ ಬದುಕು ಕೂಡ ಅಚ್ಚುಕಟ್ಟಾಗಿ ಆ ವಿದ್ಯಾರ್ಥಿಗೆ ರೂಪಿಸಬಹುದು. ಹಲವಾರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ಪಾಸ್ ಆಗ್ಬೇಕು, ಒಳ್ಳೆಯ ಕಾಲೇಜು ಸೇರಬೇಕು, ಎಂದೆಲ್ಲಾ ಕನಸು ಕಾಣುವುದು ಸಹಜ. ಎಕ್ಸಾಮ್ ಎಂಬ ಶಬ್ದ ಕೇಳಿದಾಗಲೇ ಹಲವು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಭಯಭೀತರಾಗುವವರೂ ಇದ್ದಾರೆ. ಡಿಸೆಂಬರ್ ಅಥವಾ ಜನವರಿ ತಿಂಗಳಿನಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ತಾವು ಆ ಶೈಕ್ಷಣಿಕ ವರ್ಷದಲ್ಲಿ ಓದಿದ ಪಾಠಗಳ ರಿವಿಶನ್ ಪ್ರಾರಂಭವಾಗುತ್ತದೆ. ಈಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯವೇ ಇಲ್ಲ. ಹಿಂದಿನ ಕಾಲದ ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುತ್ತಿದ್ದರು.

ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಸರ್ಕಾರ, ವಿವಿಧ ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳು ಆತ್ಮಸ್ಥೈರ್ಯ ತುಂಬುವ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂಬ ಭಯ ಖಂಡಿತ ಇರಲ್ಲ. ಆದರೆ ಈಗಿನ ಪರಿಸ್ಥಿತಿಯೇ ಬೇರೆ ರೀತಿಯಲ್ಲಿದೆ. ಕೊರೊನಾ ಮಹಾಮಾರಿಯಿಂದ ಎಸ್.ಎಸ್.ಎಲ್.ಸಿ ಎಕ್ಸಾಮ್ ಮುಂದೂಡಲ್ಪಟ್ಟಿದೆ. ಇನ್ನಷ್ಟೇ ಪರೀಕ್ಷಾ ದಿನಾಂಕವನ್ನು ಪ್ರಕಟಿಸಬೇಕಾಗಿದೆ. ವಿದ್ಯಾರ್ಥಿಗಳು ಹೆದರಬೇಕಾಗಿಲ್ಲ. ಸಂತೋಷವಾಗಿ ಮನೆಯೊಳಗಿರಿ. ತಮಗೆ ಶಿಕ್ಷಕರು ಮಾಡಿದ ಪಾಠಗಳನ್ನು ದಿನಾಲೂ ಓದಿ, ಬರೆಯಿರಿ, ದಿನಕ್ಕೊಂದು ವಿಷಯವನ್ನು ಚನ್ನಾಗಿ ರಿವಿಶನ್ ಮಾಡಿ, ನಿಮಗೆ ಓದಲು ಕಿಲ್ಲರ್ ಕೊರೊನಾ ಸಾಕಷ್ಟು ಸಮಯ ಕೊಟ್ಟಿದ್ದಾರೆ. ಲಾಕ್‍ಡೌನ್ ತೆರವಾದ ಬಳಿಕ ಏಕಾಏಕಿ ಪರೀಕ್ಷೆ ದಿನಾಂಕ ಕೂಡ ಪ್ರಕಟ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವರೇ ಹೇಳಿದ್ದಾರೆ. ತಮ್ಮ ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ವಿಡಿಯೋ ಕಾಲ್ ಅಥವಾ ಕರೆ ಮಾಡಿ ಯಾವ-ಯಾವ ಪಾಠದಲ್ಲಿ ನಿಮಗೆ ಸಂಶಯ ಇದೆ ಕೇಳಿ ಕಲಿಯಿರಿ. ಒಳ್ಳೆಯ ಅಂಕಗಳಿಸಿ ಯಾವ ಭಯವೂ ಬೇಡ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಕಿವಿಕೊಡಬೇಡಿ. ಎಸ್.ಎಸ್.ಎಲ್.ಸಿ ಪರೀಕ್ಷೆ ಲಾಕ್‍ಡೌನ್ ತೆರವಾದ ಬಳಿಕವೇ ನಡೆಯಲಿದೆ. ಮನೆಯಲ್ಲೇ ಇರಿ, ಖುಷಿಖುಷಿಯಾಗಿ ಯಾವ ಒತ್ತಡ ಇಲ್ಲದೇ ಚೆÀನ್ನಾಗಿ ಓದಿ.

?ಕೆ. ಎಂ. ಇಸ್ಮಾಯಿಲ್, ಕಂಡಕರೆ.