ಲಾಕ್‍ಡೌನ್‍ನಿಂದಾಗಿ ಕೃಷಿ ಜಮೀನಿಗೆ ತೆರಳಲು ಕೃಷಿಕರು ಪರದಾಡುತ್ತಿರುವ ಪ್ರಸಂಗ ಕುಶಾಲನಗರದಲ್ಲಿ ನಿರ್ಮಾಣಗೊಂಡು ತಿಂಗಳು ಕಳೆದಿವೆ. ಆದರೇನು ಸಮಸ್ಯೆಗೆ ಪರಿಹಾರ ಕಾಣುತ್ತಿಲ್ಲ ಎಂಬ ಕೊರಗು ಅನೇಕ ಕೃಷಿಕರನ್ನು ಚಿಂತೆಗೀಡುಮಾಡಿದೆ. ಈ ಸಮಸ್ಯೆಗೆ ಕಾರಣವಾಗಿರುವ ಕೊರೊನಾಕ್ಕೆ ಶಪಿಸಬೇಕೋ, ಇಲ್ಲವೇ ಕೊರೊನಾ ಕಾರಣದಿಂದ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿರುವ ಪೆÇಲೀಸರನ್ನು ಶಪಿಸಬೇಕೋ ಗೊತ್ತಿಲ್ಲ, ಗೊತ್ತಿಲ್ಲ ಎಂಬ ಗೊಣಗಾಟದಲ್ಲಿ ರೈತರಿದ್ದಾರೆ. ಲಾಕ್‍ಡೌನ್ ಆಗಿ ಇಡೀ ದೇಶ ವಾಸಿಗಳು ಮನೆಯಲ್ಲಿ ಕುಳಿತರೂ ಕೂಡ ಅಷ್ಟೂ ಮಂದಿಗೆ ಕುಳಿತಲ್ಲಿಗೆ ಅನ್ನ ನೀಡುತ್ತೇವೆ. ಹೀಗಿರುವಾಗ ಅನ್ನದಾತರಾದ ನಮ್ಮನ್ನು ವ್ಯವಸ್ಥೆ ಏನಾದರೂ ಲಾಕ್ ಮಾಡಿದರೆ ನಿಮ್ಮ ಸ್ಥಿತಿ ಏನಾಗುತ್ತದೆ ಎಂದು ಚಿಂತಿಸಿದ್ದೀರಾ ? ಜಮೀನಿಗೆ ತೆರಳಲಾರದೇ ಮನೆಯಲ್ಲೆ ಇದ್ದು ಮೌನ ಮುರಿದಿರುವ ರೈತರೊಬ್ಬರ ಆಕ್ರೋಷಭರಿತ ಪ್ರಶ್ನೆ.
ಕೊಡಗಿನ ಶೈಕ್ಷಣಿಕ ಹಾಗೂ ವಾಣಿಜ್ಯಿಕ ರಾಜಧಾನಿ ಕುಶಾಲನಗರ ಪಟ್ಟಣದಲ್ಲಿ ಸುತ್ತಲಿನ ಮೈಸೂರು ಹಾಗೂ ಹಾಸನ ಜಿಲ್ಲಾ ಗಡಿ ಗ್ರಾಮಗಳ ಬಹಳಷ್ಟು ಮಂದಿ ಕೃಷಿಕರು ಮನೆಗಳನ್ನು ಕಟ್ಟಿಕೊಂಡು ವಾಸವಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಕೃಷಿಯನ್ನು ಮಾಡಲು ಕುಶಾಲನಗರ ಕೇಂದ್ರ ಸ್ಥಾನವಾಗಿದೆ ಎಂಬ ಕಾರಣದಿಂದ ಇಲ್ಲಿ ವಾಸವಿರುವ ಕೃಷಿಕರ ಸಂಖ್ಯೆ ಹೆಚ್ಚೇ ಇದೆ. ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳು ವಾಡಿಕೆಯಂತೆ ಶುಂಠಿ ಬಿತ್ತನೆ ಮಾಡಲು ಸೂಕ್ತ ಸಮಯವಾಗಿರುವುದರಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ, ಹುಣಸೂರು ಮೊದಲಾದ ತಾಲೂಕಿನಾದ್ಯಂತ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಕುಶಾಲನಗರ ಭಾಗದ ಕೃಷಿಕರು ಶುಂಠಿ ಬಿತ್ತನೆ ಮಾಡಿದ್ದಾರೆ. ಆದರೆ ಕೊರೊನಾ ಬೀರಿದ ಲಾಕ್ ಡೌನ್ ಸಂಕೋಲೆಯ ಸುಳಿವೇ ಇಲ್ಲದ ಈ ಕೃಷಿಕರು ಇದೀಗ ಶುಂಠಿ ಕೃಷಿ ಮಾಡಲು ಸಂಕಷ್ಟ ಎದುರಾಗಿದೆ. ಅಂದರೆ ಕುಶಾಲನಗರದಿಂದ ಮೈಸೂರು ಜಿಲ್ಲೆಯ ಶುಂಠಿ ಕೃಷಿ ಭೂಮಿಯತ್ತ ತೆರಳಲು ಕುಶಾಲನಗರದ ಕೊಪ್ಪ ಗೇಟಿನ ಬಳಿ ಪೆÇಲೀಸರು ತಡೆಒಡ್ಡುವ ಕಾರಣ ಅನ್ಯ ಮಾರ್ಗವಿಲ್ಲದೇ ಅಲ್ಲೇ ಸಮೀಪದ ಕೃಷಿ ಭೂಮಿಗೆ ತೆರಳುವವರು ಕುಶಾಲನಗರದ ಕಾವೇರಿ ನದಿಯೊಳಗೆ ಹಾದು ಕೃಷಿ ಜಮೀನು ಸೇರಿಕೊಳ್ಳುತ್ತಿದ್ದಾರೆ. ಆದರೆ ಆ ಕೃಷಿ ಭೂಮಿಗೆ ಅಗತ್ಯ ವಿರುವ ರಸಗೊಬ್ಬರ ಮೊದಲಾದ ಪರಿಕರಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಶುಂಠಿ ಬಿತ್ತನೆ ಚಟುವಟಿಕೆಗಳಿಗೆ ಲಕ್ಷಾಂತರ ರೂಗಳನ್ನು ವ್ಯಯಿಸಿರುವ ಕೃಷಿಕರು ಜಮೀನಿಗೆ ತೆರಳಲಾಗದೇ ಲಾಕ್ ಡೌನ್ ನಿಂದ ಯಾವಾಗ ಮುಕ್ತವಾಗುತ್ತದೋ ಎಂದು ದೇವರ ಮೊರೆ ಹೋಗುತ್ತಿದ್ದಾರೆ.
ಇನ್ನು ಹೆಬ್ಬಾಲೆಯಿಂದ ಪಿರಿಯಾಪಟ್ಟಣ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಲೆ ಸೇತುವೆ ಬಳಿ ಕೃಷಿಕರಿಂದ ಹಣ ಪಡೆದು ಜಮೀನಿಗೆ ತೆರಳಲು ಬಿಡಲಾಗುತ್ತಿದೆ ಎಂಬ ಆರೋಪವನ್ನು ಕೆಲವು ರೈತರು ಶಕ್ತಿ ಯೊಂದಿಗೆ ಹೇಳಿಕೊಳ್ಳುತ್ತಿರುವ ಕಾರಣ ಅಲ್ಲಿನ ಕರ್ತವ್ಯ ನಿರತರು ಕನಿಷ್ಟ ಮಾನವೀಯತೆ ಮೆರೆಯಬೇಕಿದೆ. ಇತ್ತ ಕುಶಾಲನಗರದ ಕೃಷಿ, ಕಂದಾಯ ಹಾಗೂ ಪೆÇಲೀಸ್ ಇಲಾಖೆಯ ಅಧಿಕಾರಿಗಳು ಕೂಡ ಕೃಷಿಕರ ನೆರವಿಗೆ ಧಾವಿಸುವ ಯತ್ನ ಮಾಡಬೇಕಿದೆ.
ಈ ಬಗ್ಗೆ ಕುಶಾಲನಗರದ ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಜೊತೆ ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ರೆಡ್ ಜೋನ್ ವ್ಯಾಪ್ತಿಯಲ್ಲಿ ಇರುವ ಮೈಸೂರು ಜಿಲ್ಲೆಯತ್ತ ಕುಶಾಲನಗರದ ಗಡಿ ಭಾಗದಿಂದ ಬಿಡಲು ಸಾಧ್ಯವೇ ಇಲ್ಲ. ಕೃಷಿಕರು ತೆರಳಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ಅವರು ಜಿಲ್ಲಾಧಿಕಾರಿಗಳಿಂದ ಪರವಾನಗಿ ಪಡೆದು ಬರಲಿ ಎನ್ನುತ್ತಾರೆ. ಕೃಷಿ ಇಲಾಖೆಯ ಸಚಿವರು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಯಾರೂ ಕೂಡ ಅಡ್ಡಿ ಮಾಡಬಾರದು ಎನ್ನುತ್ತಾರೆ. ಆದರೆ ಅದು ಕೃತಿ ರೂಪಕ್ಕೆ ಬಾರದಿರುವುದು ಮಾತ್ರ ಬೇಸರದ ಸಂಗತಿ. ಇನ್ನಾದರೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಕೃಷಿಕರ ಗೋಳು ಕೇಳಿ ಬಗೆಹರಿಸಬೇಕಿದೆ.