ಕೊರೊನಾ ವಾರಿಯರ್ಸ್‍ಗೆ ರೂ. 30 ಲಕ್ಷ ಪರಿಹಾರ
ಬೆಂಗಳೂರು, ಏ. 30: ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ 30 ಲಕ್ಷ ರೂಪಾಯಿಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇತರ ಕೋವಿಡ್ 19 ವಾರಿಯರ್ಸ್‍ಗೆ ಸರಕಾರ ನೀಡಿರುವ ಆರೋಗ್ಯ ವಿಮೆಯ ಭಾಗ್ಯ ಮಾತ್ರ ಅಂಗನವಾಡಿ ಕಾರ್ಯಕರ್ತೆಯರಿಗೆ ಇರಲಿಲ್ಲ. ವೈದ್ಯರು, ಆರೋಗ್ಯ ಸಹಾಯಕಿಯರು, ಪೊಲೀಸರು, ಆಶಾ ಕಾರ್ಯಕರ್ತೆಯರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಕೂಡ ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ಲಾಕ್‍ಡೌನ್ ಆರಂಭವಾದ ದಿನದಿಂದ ಅಂಗನವಾಡಿ ಕಾರ್ಯಕರ್ತೆಯರು ಸುಡು ಬಿಸಿಲಿನಲ್ಲಿಯೂ ಆಯಾಯ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮನೆ - ಮನೆಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಹೊರ ಜಿಲ್ಲೆಗಳಿಂದ, ಹೊರ ರಾಜ್ಯದಿಂದ ಇಲ್ಲಿಗೆ ಬಂದಿರುವ ನೂರಾರು ಮಂದಿಯನ್ನು ಗುರುತಿಸಿ ಅವರನ್ನು ಹೋಮ್ ಕ್ವಾರಂಟೈನ್‍ನಲ್ಲಿರಿಸಿ, ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಕೋವಿಡ್ 19 ಸೋಂಕಿನ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಹಾಗೂ ಅವರ ಪರಿಶ್ರಮವನ್ನು ಗುರುತಿಸದಿರುವುದು ಅಂಗನವಾಡಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.
ಮೇ 4ರ ನಂತರ ಲಾಕ್‍ಡೌನ್ ಸಡಿಲಿಕೆ !
ಬೆಂಗಳೂರು, ಏ. 30: ರಾಜ್ಯದ ಕಂಟೈನ್‍ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮೇ 4ರ ನಂತರ ಲಾಕ್‍ಡೌನ್ ಸಡಿಲಿಕೆ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟ ಮಾಹಿತಿ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿ, ಕೊರೊನಾ ಸೋಂಕು ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ಮೇ 4ರ ಬಳಿಕವೂ ಲಾಕ್‍ಡೌನ್ ಮುಂದುವರೆಯಲಿದೆ. ಆದರೆ, ಉಳಿದ ವಲಯಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಸ್ಪಷ್ಟ ಮಾಹಿತಿ ದೊರೆತಿದೆ. ನಾಲ್ಕನೇ ತಾರೀಖಿನ ನಂತರ ಪ್ರಧಾನಿ ಮೋದಿ ಕೆಲವು ಸೂಚನೆಗಳನ್ನು ಕೊಡಲಿದ್ದಾರೆ. ಅದಾದ ಬಳಿಕ ಹಂತ ಹಂತವಾಗಿ ನಿರ್ಬಂಧ ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಹಸಿವು ತಣಿಸಲು ರೂ. 65 ಸಾವಿರ ಕೋಟಿ
ನವದೆಹಲಿ, ಏ. 30: ಬಡವರ ಹೊಟ್ಟೆ ತುಂಬಿಸಲು ದೇಶಕ್ಕೆ ರೂ. 65,000 ಕೋಟಿ ಅಗತ್ಯವಿದ್ದು, ಇಂತಹ ಸಂದರ್ಭದಲ್ಲಿ ಭಾರತ ಅತ್ಯಂತ ಬುದ್ಧಿವಂತಿಕೆಯಿಂದ ಲಾಕ್‍ಡೌನ್ ತೆಗೆಯಬೇಕಿದೆ ಎಂದು ಆರ್ಥಿಕ ತಜ್ಞ ರಘುರಾಮ್ ರಾಜನ್ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಇದರ ಪರಿಮಾಮ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲಾಕ್‍ಡೌನ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನೆಲೆ ದೇಶದ ಆರ್ಥಿಕ ಸ್ಥಿತಿ, ಮತ್ತಿತರ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವೀಡಿಯೋ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. ಈ ವೀಡಿಯೋ ಸರಣಿಯಲ್ಲಿ ಮೊದಲ ಅತಿಥಿಯಾಗಿ ಆರ್‍ಬಿಐ ಮಾಜಿ ಗವರ್ನರ್ ಹಾಗೂ ದೇಶದ ಆರ್ಥಿಕ ತಜ್ಞ ರಘುರಾಮ್ ರಾಜನ್ ಮಾತನಾಡಿದರು.
49 ತಾಲೂಕುಗಳು ಬರಪೀಡಿತ
ಬೆಂಗಳೂರು, ಏ. 30: ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಿಸಲ್ಪಟ್ಟ ಪ್ರದೇಶಗಳಲ್ಲಿ ಇನ್ನೂ ಮಳೆ ಬಾರದ ಹಿನ್ನೆಲೆ ರಾಜ್ಯದ 18 ಜಿಲ್ಲೆಗಳಲ್ಲಿರುವ 49 ತಾಲೂಕುಗಳನ್ನು ಇನ್ನೂ ಒಂದು ತಿಂಗಳ ಕಾಲ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಮಳೆ ಪ್ರಾರಂಭವಾಗಿಲ್ಲ. ಅಲ್ಲಿ ಬರದ ಛಾಯೆ ಮುಂದುವರಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಸಮಸ್ಯೆ ಮುಂದುವರಿದಿದೆ. ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಅಲ್ಲಿ ಮಳೆ ಬಾರದ ಹಿನ್ನೆಲೆ ಮತ್ತೆ ಒಂದು ತಿಂಗಳ ಕಾಲ ಈ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದರಿಂದ ಅಲ್ಲಿ ಇನ್ನೂ ಒಂದು ತಿಂಗಳು ಕುಡಿಯುವ ನೀರು, ಬರ ಕಾಮಗಾರಿ ಮುಂದುವರಿಯಲಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಶೇ. 10 ರಿಂದ 50 ರಷ್ಟು ವೇತನ ಕಡಿತ
ಮುಂಬೈ, ಏ. 30: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿ ಸುವುದಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ದೇಶದ ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಹಲವು ಕಂಪೆನಿಗಳು ಅಸ್ತಿತ್ವ ಉಳಿಸಿ ಕೊಳ್ಳಲು ಹೆಣಗಾಡುತ್ತಿವೆ. ದೇಶದ ಅತಿ ದೊಡ್ಡ ಕಂಪೆನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಸಹ ಈ ಸಂಕಷ್ಟದಿಂದ ಪಾರಾಗಲು ಸಿಬ್ಬಂದಿಯ ವೇತನದಲ್ಲಿ ಶೇ. 10 ರಿಂದ ಶೇ. 50 ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಇನ್ನು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ತಮ್ಮ ಇಡೀ ಸಂಬಳವನ್ನೇ ತ್ಯಾಗ ಮಾಡಲು ಮುಂದಾಗಿದ್ದಾರೆ. ಮುಕೇಶ್ ಅಂಬಾನಿ ಅವರು ತಮ್ಮ ರೂ. 15 ಕೋಟಿ ವೇತನ ಬಿಟ್ಟುಕೊಟ್ಟಿದ್ದು, ರಿಲಯನ್ಸ್ ನಿರ್ದೇಶಕ ಮಂಡಳಿಯ ಕಾರ್ಯಕಾರಿ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಹಿರಿಯ ಸಿಬ್ಬಂದಿಯ ವೇತನವನ್ನು ಶೇ. 30 ರಿಂದ ಶೇ. 50 ರಷ್ಟು ಕಡಿತಗೊಳಿಸಲಾಗುತ್ತಿದೆ. 15 ಲಕ್ಷ ರೂಪಾಯಿ ಗಿಂತ ಕಡಿಮೆ ವೇತನ ಪಡೆಯುವ ಸಿಬ್ಬಂದಿ ವೇತನದಲ್ಲಿ ಯಾವುದೇ ಕಡಿತ ಇಲ್ಲ. ಆದರೆ 15 ಲಕ್ಷ ರೂ.ಗಿಂತ ಹೆಚ್ಚಿರುವ ಸಿಬ್ಬಂದಿಯ ವೇತನದಲ್ಲಿ ಶೇ. 10 ರಷ್ಟು ಕಡಿತಗೊಳಿಸಲಾಗುತ್ತಿದೆ ಎಂದು ರಿಲಾಯನ್ಸ್ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಯರ್ ಹಾಳಾಗಿರುವ ಸಾಧ್ಯತೆ
ಬೆಂಗಳೂರು, ಏ. 30: ಮೇ 4ರ ನಂತರ ಕೆಲವು ಮದ್ಯದ ಅಂಗಡಿ ಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ವೈನ್ ಮಾರಾಟಗಾರರ ಒಕ್ಕೂಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ. ಎಲ್ಲಾ ಮದ್ಯದ ಅಂಗಡಿಗಳಲ್ಲಿ ಭಾರೀ ಪ್ರಮಾಣದ ಬಿಯರ್ ಸ್ಟಾಕ್ ಇದೆ. ಒಂದು ವೇಳೆ ಮೇ 4ರ ನಂತರ ಬಿಯರ್ ಮಾರಾಟಕ್ಕೆ ಅನುಮತಿ ನೀಡದಿದ್ದರೆ ಆ ಎಲ್ಲಾ ಬಿಯರ್ ಅನ್ನು ಸುಟ್ಟು ಹಾಕಬೇಕಾಗುತ್ತದೆ. ಬಿಯರ್ ಅನ್ನು ತಯಾರಾದ ದಿನದಿಂದ ಆರು ತಿಂಗಳಲ್ಲಿ ಮಾತ್ರ ಉಪಯೋಗಿಸಬೇಕು ಎಂದು ವೈನ್ ಒಕ್ಕೂಟ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದೆ. ಈಗಾಗಲೇ ನಾಲ್ಕು ತಿಂಗಳಿಂದ ಬಿಯರ್ ಸ್ಟಾಕ್ ಇದೆ. ಈಗ ಬೇಸಿಗೆ ಇರುವುದರಿಂದ ಮತ್ತು ಉಷ್ಣಾಂಶ ಹೆಚ್ಚಾಗಿರುವುದರಿಂದ ಬಿಯರ್ ಹಾಳಾಗಿರುವ ಸಾಧ್ಯತೆ ಇದೆ ಎಂದು ವೈನ್ ಒಕ್ಕೂಟದ ಕಾರ್ಯದರ್ಶಿ ಗೋವಿಂದರಾಜ್ ಹೆಗಡೆ ಹೇಳಿದ್ದಾರೆ. ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡದಿರುವುದರಿಂದ ರಾಜ್ಯ ಸರ್ಕಾರಕ್ಕೂ ಸುಮಾರು 60 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಗೋವಿಂದರಾಜು ಅವರು ತಿಳಿಸಿದ್ದಾರೆ.
ಹಿರಿಯ ನಟ ರಿಷಿ ಕಪೂರ್ ಅಂತ್ಯಕ್ರಿಯೆ
ಮುಂಬೈ, ಏ. 30: ಲಾಕ್‍ಡೌನ್ ಮಧ್ಯೆ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಂತ್ಯಕ್ರಿಯೆ ದಕ್ಷಿಣ ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ನಡೆಯಿತು. ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ರಿಷಿ ಕಪೂರ್ ಪತ್ನಿ ನೀತೂ ಸಿಂಗ್ ಕಪೂರ್, ಪುತ್ರ ರಣಬೀರ್ ಕಪೂರ್, ಸಹೋದರ ರಣಧೀರ್ ಕಪೂರ್, ಕರಿನಾ ಕಪೂರ್, ಸೈಫ್ ಅಲಿಖಾನ್, ಅನಿಲ್ ಅಂಬಾನಿ, ಅಯಾನ್ ಮುಖರ್ಜಿ, ಅಲಿಯಾ ಭಟ್, ಅಭಿಷೇಕ್ ಬಚ್ಚನ್ ಮತ್ತಿತರ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಮುಂಬೈ ಪೊಲೀಸರು ಮೊದಲು ರಿಷಿ ಕಪೂರ್ ಪಾರ್ಥಿವ ಶರೀರವನ್ನು ನೇರವಾಗಿ ಚಿತಾಗಾರಕ್ಕೆ ಸಾಗಿಸುವಂತೆ ಸಲಹೆ ನೀಡಿದರು. ಆದರೆ, ಕುಟುಂಬ ಸದಸ್ಯರು ರಿಷಿ ನಿವಾಸಕ್ಕೆ ಕೊಂಡೊಯ್ದ ನಂತರವೇ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಸಾಗಿಸಿದರು. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಬಾಲಿವುಡ್ ಚಿತ್ರರಂಗದ ಮೇರು ತಾರೆ ರಿಷಿ ಕಪೂರ್ ಹೆಚ್‍ಎನ್ ರಿಯಲನ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದರು.