ಮಡಿಕೇರಿ, ಏ. 30: ಭಾರತೀಯ ಸೇನೆಯಲ್ಲಿ ಹಾಲಿ ಕರ್ತವ್ಯದಲ್ಲಿದ್ದ ಕೊಡಗು ಜಿಲ್ಲೆಯ ಮೂವರು ಲೆಫ್ಟಿನೆಂಟ್ ಜನರಲ್‍ಗಳ ಪೈಕಿ ಓರ್ವರಾಗಿದ್ದ ಪಟ್ಟಚೆರವಂಡ ಸಿ. ತಿಮ್ಮಯ್ಯ ಅವರು ಇದೀಗ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಏ. 30ರಂದು ಅವರು ವಯೋನಿವೃತ್ತಿ ಹೊಂದುತ್ತಿದ್ದಾರೆ. ಪಿ.ಸಿ. ತಿಮ್ಮಯ್ಯ ಅವರು ಪ್ರಸ್ತುತ ಶಿಮ್ಲಾದಲ್ಲಿ ಜನರಲ್ ಆಫೀಸರ್ ಇನ್ ಚೀಫ್ (ಉ.ಔ.ಅ.) ಆಗಿದ್ದ ಆರ್ಮಿ ಟ್ರೈನಿಂಗ್ ಕಮಾಂಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಜಿಲ್ಲೆಯ ಮತ್ತೋರ್ವ ಲೆ.ಜ. ಆಗಿದ್ದ ದಿ. ಬಿದ್ದಂಡ ಸಿ. ನಂದಾ ಅವರು ಈ ಹಿಂದೆ ಲೆಫ್ಟಿನೆಂಟ್ ಜನರಲ್ ರ್ಯಾಂಕ್‍ನಲ್ಲಿದ್ದ ಸಂದರ್ಭ ಆರ್ಮಿ ಟ್ರೈನಿಂಗ್ ಕಮಾಂಡ್ ಆಗಿದ್ದರು. ಇವರ ಬಳಿಕ ಈ ಸ್ಥಾನ ಅಲಂಕರಿಸಿದ ಮತ್ತೋರ್ವ ಅಧಿಕಾರಿ ತಿಮ್ಮಯ್ಯ ಅವರಾಗಿದ್ದಾರೆ.

ತಿಮ್ಮಯ್ಯ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್.ಡಿ.ಎ.) ಮೂಲಕ ಚಿನ್ನದ ಪದಕದ ಸಾಧನೆಯೊಂದಿಗೆ ಸೇನೆಗೆ ನಿಯುಕ್ತಿಗೊಂಡಿದ್ದರು. ಇಂಡಿಯನ್ ಮಿಲಿಟರಿ ಅಕಾಡೆಮಿ (I.ಒ.ಂ.)ಯಲ್ಲಿ ಆ ಬ್ಯಾಚ್‍ನಲ್ಲಿ ಪ್ರಥಮ ಸ್ಥಾನದೊಂದಿಗೆ ಸ್ವಾರ್ಡ್ ಆಫ್ ಹಾನರ್ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಇದೀಗ ಸುಮಾರು 40 ವರ್ಷಗಳ ಸುದೀರ್ಘ ಸೇವೆಯ ಬಳಿಕ ಪಿ.ಸಿ. ತಿಮ್ಮಯ್ಯ ಅವರು ನಿವೃತ್ತಿ ಹೊಂದುತ್ತಿದ್ದಾರೆ.