ಮಡಿಕೇರಿ, ಏ. 30: ಪ್ರಸ್ತುತ ದೇಶದಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಇಲ್ಲಿನ ಜನತೆ ತೋರಿರುವ ಜವಾಬ್ದಾರಿಯುತ ನಡೆಯ ಬಗ್ಗೆ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಶಕ್ತಿ’ಯೊಂದಿಗೆ ದೂರವಾಣಿ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು, ಜಿಲ್ಲಾಡಳಿತದ ಕಾರ್ಯನಿರ್ವಹಣೆ, ಜನತೆಯ ಸಹಕಾರದಿಂದಾಗಿ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ‘ಹಸಿರು ವಲಯ’ವಾಗಿ ಪರಿಗಣಿಸಲ್ಪಟ್ಟಿದೆ ಎಂದರು.ಜಿಲ್ಲೆ ಹಸಿರುವಲಯವಾಗಿ ಪರಿಗಣಿಸಲ್ಪಟ್ಟಿದ್ದರೂ ನೆರೆಯ ಜಿಲ್ಲೆಗಳಾದ ಮಂಗಳೂರು, ಮೈಸೂರು ಸನಿಹದ ರಾಜ್ಯವಾದ ಕೇರಳದ ಕಣ್ಣೂರು, ಕಾಸರಗೋಡು, ಕೋಝಿಕೋಡ್ ಇನ್ನೂ ‘ರೆಡ್ ಜೋನ್’ನಲ್ಲಿದೆ. ಇದರಿಂದಾಗಿ ಅಂತರ್ ಜಿಲ್ಲೆ, ಅಂತರರಾಜ್ಯದ ಸಂಪರ್ಕ ಕಷ್ಟಸಾಧ್ಯವಾಗಿಯೇ ಇದೆ. ಆಂತರಿಕವಾಗಿ ಒಂದಷ್ಟು ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದರು.ಕೇರಳ ಸಂಪರ್ಕ ನಿರ್ಬಂಧದ ಬಗ್ಗೆ ಪ್ರಾರಂಭದಿಂದಲೂ ಅಲ್ಲಿಂದ ಇದರ ತೆರವಿಗೆ ಒತ್ತಡ ಬರುತ್ತಿತ್ತು. ಆದರೆ ಸ್ವಲ್ಪ ಸಮಯ ಕಾಯಬೇಕೆಂದು ಸೂಚಿಸಲಾಗಿದೆ. ತಾವು ದಿನಂಪ್ರತಿ ಅಲ್ಲಿನ ಡಿಸಿ, ಎಸ್ಪಿ, ಆರೋಗ್ಯ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿರುವದಾಗಿಯೂ ಸಚಿವರು ತಿಳಿಸಿದರು. ಕೊಡಗು ಜಿಲ್ಲೆಯ ಕುರಿತಾಗಿಯೂ ಕೇಂದ್ರಕ್ಕೆ ದಿನಂಪ್ರತಿ ವರದಿ ಬರುತ್ತಿದೆ ಎಂದು ಅವರು ಮಾಹಿತಿಯಿತ್ತರು.