ಸೋಮವಾರಪೇಟೆ, ಏ. 29: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಬಸ್-ಲಾರಿ ಚಾಲಕರು ಮತ್ತು ಕೆಲಸಗಾರರ ಸಂಘದ ಸದಸ್ಯರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಬಸ್-ಲಾರಿಗಳ ಒಡಾಟವಿಲ್ಲದೇ ಚಾಲಕರು ಮತ್ತು ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಜೀವನವೇ ದುಸ್ತರವಾಗಿದೆ. ಮನೆಯ ವಿದ್ಯುತ್ ಬಿಲ್, ದಿನೋಪಯೋಗಿ ವಸ್ತುಗಳ ಖರೀದಿಗೂ ತೊಂದರೆಯಾಗಿದ್ದು, ಜಿಲ್ಲಾಡಳಿತದ ಮೂಲಕ ಚಾಲಕರು ಮತ್ತು ಕೆಲಸಗಾರರಿಗೆ ಪಡಿತರ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಕಚೇರಿಯ ಶಿರಸ್ತೇದಾರ್ ಮೂಲಕ ಜಿಲ್ಲಾಡಳಿತಕ್ಕೆ, ಸಂಘದ ಅಧ್ಯಕ್ಷ ಪಿ. ಮಧು, ಕಾರ್ಯದರ್ಶಿ ಜಿತೇಂದ್ರ ಅವರುಗಳು ಮನವಿ ಸಲ್ಲಿಸಿದ್ದಾರೆ.

ಟೈಲರ್ಸ್ ಅಸೋಸಿಯೇಷನ್‍ನಿಂದ:

ಲಾಕ್‍ಡೌನ್‍ನಿಂದ ಟೈಲರ್ಸ್‍ಗಳ ಬದುಕು ಸಂಕಷ್ಟದಲ್ಲಿದ್ದು, ಸರ್ಕಾರ ದಿಂದ ಪರಿಹಾರ ಒದಗಿಸಬೇಕೆಂದು ಕರ್ನಾಟಕ ಟೈಲರ್ಸ್ ಅಸೋಸಿ ಯೇಷನ್‍ನ ಸೋಮವಾರಪೇಟೆ ಕ್ಷೇತ್ರ ಸಮಿತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಟೈಲರ್ಸ್ ಅಂಗಡಿಗಳು ಬಂದ್ ಆಗಿರುವದರಿಂದ ಜೀವನ ಸಾಗಿಸಲು ಕಷ್ಟಕರವಾಗಿದೆ. ಕಳೆದೊಂದು ತಿಂಗಳಿನಿಂದ ಉದ್ಯಮ ನೆಲಕ್ಕಚ್ಚಿರುವ ದರಿಂದ ಬದುಕು ಅತ್ರಂವಾಗಿದ್ದು, ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮದುವೆ ಸೇರಿದಂತೆ ಶುಭ ಸಮಾರಂಭಗಳೂ ರದ್ದಾಗಿರುವದರಿಂದ ಟೈಲರ್ಸ್‍ಗಳಿಗೆ ಕೆಲಸವೂ ಇಲ್ಲದಂತಾಗಿದೆ. ಈ ಹಿನ್ನೆಲೆ ಜಿಲ್ಲಾದ್ಯಂತ ಇರುವ ಟೈಲರ್ಸ್‍ಗಳಿಗೆ ಆಹಾರ ಕಿಟ್, ಮಾಸಿಕ ಪರಿಹಾರ ನೀಡುವದರೊಂದಿಗೆ ಷರತ್ತುಗಳಿ ಗೊಳಪಟ್ಟು ಅಂಗಡಿ ತೆರೆಯಲು ಅವಕಾಶ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸೋಮವಾರ ಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಬಿ. ಲಿಂಗಪ್ಪ, ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದೀಶ್, ಖಜಾಂಚಿ ಬಿ.ಎಸ್. ಕುಮಾರ್ ಅವರುಗಳು ಉಪಸ್ಥಿತರಿದ್ದರು.