ಗೋಣಿಕೊಪ್ಪಲು, ಏ. 29 : ಅರಣ್ಯ ಸಚಿವರನ್ನು ಭೇಟಿ ಮಾಡಿದ ಕೊಡಗು ಜಿಲ್ಲಾ ರೈತ ಸಂಘದ ಮುಖಂಡರು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಹಾಗೂ ಹುಲಿ ಹಾವಳಿಯಿಂದ ಜಾನುವಾರುಗಳ ಸಾವಿನ ಬಗ್ಗೆ ವಿಶೇಷ ಕ್ರಮವಹಿಸ ಬೇಕೆಂದು ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮುಂದಾಳತ್ವ ದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಮೈಸೂರಿನ ಅರಣ್ಯ ಭವನದ ಸಭಾಂಗಣದಲ್ಲಿ ಆಯೋಜಿಸಿದ ಉನ್ನತ ಅಧಿಕಾರಿಗಳ ತುರ್ತು ಸಭೆಗೆ ಆಗಮಿಸಿದ ಅರಣ್ಯ ಸಚಿವ ಆನಂದ್ ಸಿಂಗ್ ಅವರನ್ನು ಜಿಲ್ಲೆಯ ರೈತ ಮುಖಂಡರು ಕೊಡಗು ಜಿಲ್ಲೆಯಲ್ಲಿ ರೈತರು ಆನೆ-ಮಾನವ ಸಂಘರ್ಷ ದಿಂದ ಅನುಭವಿಸುತ್ತಿರುವ ಯಾತನೆ ಹಾಗೂ ನಿರಂತರವಾಗಿ ದ.ಕೊಡಗಿ ನಲ್ಲಿರುವ ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.

ಕೊಡಗು ಜಿಲ್ಲೆಯಲ್ಲಿ ಹುಲಿ ಹಾವಳಿಯ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವಿಶೇಷ ಗಮನ ಸೆಳೆದ ಹಿನ್ನೆಲೆ ಸಚಿವರು ಬೇರೆ ಜಿಲ್ಲೆಯ ಪ್ರವಾಸದ ನಡುವೆ ಬಿಡುವು ಮಾಡಿಕೊಂಡು ತುರ್ತು ಸಭೆಯಲ್ಲಿ ಕೊಡಗಿನ ಸಮಸ್ಯೆಗಳನ್ನು ಚರ್ಚಿಸಿದರು. ಆನೆ-ಮಾನವ ಸಂಘರ್ಷದಲ್ಲಿ ಮಾನವನ ಜೀವಕ್ಕೆ ಹಾನಿಯಾದ ಸಂದರ್ಭ ಇಲಾಖೆ ನೀಡುತ್ತಿರುವ ಪರಿಹಾರ ರೂ. 7.50.ಲಕ್ಷ ಹಾಗೂ ಹುಲಿ ದಾಳಿ ಸಂದರ್ಭ ಜಾನುವಾರು ಮೃತಪಟ್ಟ ಸಂದರ್ಭ ಕೊಡುವ ರೂ. 10 ಸಾವಿರ ಪರಿಹಾರ ಏನೇನು ಸಾಲದು ಇದನ್ನು ರೂ. 25 ಲಕ್ಷ ಹಾಗೂ ರೂ. 50 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಮನು ಸೋಮಯ್ಯ ಸಚಿವರ ಗಮನ ಸೆಳೆದರು. ಈ ಸಂದರ್ಭ ರೈತ ಮುಖಂಡರ ಮಾತಿಗೆ ಉತ್ತರಿಸಿದ ಸಚಿವರು ಲಾಕ್‍ಡೌನ್ ಮುಗಿದ ಕೂಡಲೇ ರೈತ ಮುಖಂಡರೊಂದಿಗೆ ಜಿಲ್ಲೆಯಲ್ಲಿ ಶಾಸಕರ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಆನೆ-ಮಾನವ ಸಂಘರ್ಷ, ಹುಲಿ ದಾಳಿಗೆ ಜಾನುವಾರು ಬಲಿ, ವನ್ಯಜೀವಿಗಳಿಂದ ಬೆಳೆ ನಷ್ ವಿಚಾರದಲ್ಲಿ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೆಪಂಡ ಪ್ರವೀಣ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. - ಹೆಚ್.ಕೆ. ಜಗದೀಶ್