*ಗೋಣಿಕೊಪ್ಪಲು, ಏ. 29 : ಪಟ್ಟಣದ ತ್ಯಾಜ್ಯ ತುಂಬಿ ಕೊಳೆಯುತ್ತಿದ್ದ ಇಲ್ಲಿನ ಕೀರೆಹೊಳೆಯ ಹೂಳು ಎತ್ತುವ ಕಾರ್ಯ ಭರದಿಂದ ಸಾಗುತ್ತಿದೆ. ಗ್ರಾಮ ಪಂಚಾಯಿತಿ ಈ ಬಾರಿ ಮಳೆಗಾಲ ಆರಂಭವಾಗುವುದಕ್ಕೆ ಒಂದು ತಿಂಗಳೇ ಮೊದಲೇ ಹೊಳೆ ಸ್ವಚ್ಛಮಾಡುವ ಕಾರ್ಯಕ್ಕೆ ಕೈ ಹಾಕಿದೆ.

ನೇತಾಜಿ ಬಡಾವಣೆಯಿಂದ ಹೂಳು ತೆಗೆಯುವ ಕೆಲಸವನ್ನು ಆರಂಭಿಸಿದೆ. ಹೊಳೆಯಲ್ಲಿ ತುಂಬಿದ್ದ ಕಸ ಮತ್ತು ಮಣ್ಣನ್ನು ಜೆಸಿಬಿ ಮೂಲಕ ತೆಗೆಸಲಾಗುತ್ತಿದೆ.

ಕಳೆದ ಬಾರಿ ಹೊಳೆಯ ಹೂಳು ತೆಗೆಸದೇ ಇದ್ದುದರಿಂದ ಹೊಳೆಯ ನೀರು ಮಳೆಗಾಲದಲ್ಲಿ ಇಡೀ ಗೋಣಿಕೊಪ್ಪಲನ್ನು ಆವರಿಸಿ ಇನ್ನಿಲ್ಲದ ಸಂಕಷ್ಟ ಸೃಷ್ಟಿಸಿತ್ತು.

ಈ ಬಾರಿ ಇಂತಹ ಅನಾಹುತ ಸಂಭವಿಸದೇ ಇರಲಿ ಎಂಬ ಮುಂದಾಲೋಚನೆಯಿಂದ ಪಿಡಿಒ ಶ್ರೀನಿವಾಸ್ ಮುತುವರ್ಜಿ ವಹಿಸಿ ಕಾಮಗಾರಿ ಆರಂಭಿಸಿದ್ದಾರೆ.

ಹೊಳೆಯ ದಡದಲ್ಲಿರುವ ಬಡಾವಣೆಗಳ ಜನತೆ ಮನೆಯ ತ್ಯಾಜ್ಯವನ್ನು ತಂದು ಹೊಳೆಗೆ ಎಸೆದು ಹೋಗುತ್ತಿದ್ದಾರೆ. ಇದರಿಂದಾಗಿ ಹೊಳೆ ತ್ಯಾಜ್ಯದಿಂದ ತುಂಬಿ ಹೋಗಿದೆ. ಕಳೆದ ಬಾರಿ ಈ ಕಾರಣಕ್ಕೆ ನೀರು ಹರಿಯದೆ ಮನೆಗಳು ಮುಳುಗಿದ್ದರೂ ಜನತೆಗೆ ಬುದ್ಧಿ ಬಂದಂತಿಲ್ಲ.

ಮಳೆಗಾಲದಲ್ಲಿ ಹೊಳೆಯ ನೀರು ಲಕ್ಷ್ಮಣ ತೀರ್ಥ ನದಿ ಸೇರಿ ಮುಂದೆ ಈ ನೀರನ್ನು ಕುಡಿಯಲು ಬಳಸಲಾಗುತ್ತದೆ. ಇಂತಹ ಕುಡಿಯುವ ನೀರಿಗೆ ಜನತೆ ತ್ಯಾಜ್ಯ ತುಂಬಿಸಿ ಕೊಳೆಯುವಂತೆ ಮಾಡುತ್ತಾರೆ. ಹೊಳೆಗೆ ತ್ಯಾಜ್ಯ ಎಸೆಯುವವರ ಮೇಲೆ ಗ್ರಾಮ ಪಂಚಾಯಿತಿ ಕಠಿಣ ಕ್ರಮ ಜರುಗಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

-ಎನ್.ಎನ್.ದಿನೇಶ್