ಸಿದ್ದಾಪುರ, ಏ. 29: ಲಾಕ್‍ಡೌನ್‍ಗೆ ತುತ್ತಾಗಿರುವ ಕುಟುಂಬ, ಇದೀಗ ತುತ್ತಿಗಾಗಿ ಹಾಗೂ ಮಗನ ಚಿಕಿತ್ಸೆಗಾಗಿ ಪರದಾಡುತ್ತಿರುವ ಹೃದಯ ವಿದ್ರಾವಕ ದೃಶ್ಯ ಮಾಲ್ದಾರೆ ಸಮೀಪದ ಹಂಚೆ ತಿಟ್ಟು ಹಾಡಿಯಲ್ಲಿ ಕಂಡುಬಂದಿದೆ.

ಮಾಲ್ದಾರೆ ಗ್ರಾಮ ಪಂಚಾಯಿತಿಯ ಹಂಚೆ ತಿಟ್ಟು ಗ್ರಾಮದ ನಿವಾಸಿ ಶಾಂತ ತನ್ನ ಒಬ್ಬ ಮಗ ವಿಠ್ಠಲ (34) ನೊಂದಿಗೆ ವಾಸವಿದ್ದಾರೆ. ಕೂಲಿ ಕಾರ್ಮಿಕರಾದ ಇವರ ಬದುಕಿಗೆ ವಿಧಿಯ ವಕ್ರ ದೃಷ್ಟಿ ಬಿದ್ದ ಪರಿಣಾಮ, ವೃದ್ಧಾಪ್ಯದಲ್ಲಿ ತಾಯಿಗೆ ಆಸರೆಯಾಗಬೇಕಾದ ಮಗನ ಬದುಕು ಬಲಿಯಾಗಿದೆ. ಹದಿನಾಲ್ಕು ವರ್ಷಗಳ ಹಿಂದೆ ತೋಟದಲ್ಲಿ ಮರ ಕೆಲಸಕ್ಕೆ ತೆರಳಿದ ವಿಠಲ ಮರವೇರಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದಿಂದ ಬಿದ್ದು ಬೆನ್ನು ಮೂಳೆ ಹಾಗೂ ಕಾಲುಗಳ ಮೂಳೆ ಮುರಿತಕ್ಕೊಳಗಾದನು. ಪ್ರಾರಂಭದಲ್ಲಿ ಸ್ಥಳೀಯವಾಗಿ ಮಗನಿಗೆ ಚಿಕಿತ್ಸೆ ಕೊಡಿಸಿದ ಶಾಂತ, ಸಾಲ ಮಾಡಿ ಮಗನನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ದಾಖಲಿಸುತ್ತಾರೆ. ಶಸ್ತ್ರಚಿಕಿತ್ಸೆ ನಡೆಸಿ ಬೆನ್ನಿಗೆ ರಾಡ್ ಅಳವಡಿಸಿ ಕೆಲವು ದಿನಗಳ ನಂತರ ಮನೆಗೆ ಹಿಂತಿರುಗುತ್ತಾರೆ. ಅಷ್ಟರಲ್ಲೇ ಶಾಂತ ಮಗನಿಗಾಗಿ ಸಾಲದ ಮೇಲೆ ಸಾಲ ಮಾಡಿದ್ದಲ್ಲದೆ ಇದ್ದ ವಸ್ತು, ಒಡವೆಗಳು ದೂರವಾದವು. ಇದಾದ ನಂತರ ವರ್ಷದಲ್ಲಿ ಎರಡು ಮೂರು ಬಾರಿ ಚಿಕಿತ್ಸೆಗೆ ಮಂಗಳೂರಿಗೆ ಪ್ರಯಾಣ. ಹೀಗೆ ಮಗನಿಗಾಗಿ ಶಾಂತ ಸ್ಥಳೀಯ ಕಾಫಿ ತೋಟಗಳಲ್ಲಿ ಕೆಲಸಕ್ಕೆ ತೆರಳಿ ಮಗನ ಚಿಕಿತ್ಸೆಗೆ ಹರಸಾಹಸ ಪಡುತ್ತಿದ್ದಾರೆ.

ಮಗ ಹಾಸಿಗೆಯಲ್ಲಿ ! : ಮರವೇರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರದಿಂದ ಬಿದ್ದು ಬೆನ್ನು ಮೂಳೆ ಮುರಿದು ಹಾಸಿಗೆ ಹಿಡಿದಿದ್ದಾನೆ. ಕೂಲಿ ಕೆಲಸ ಮಾಡಿ ಸಂತೋಷದಿಂದ ಬದುಕುತ್ತಿದ್ದ ವಿಠ್ಠಲ ಕುಟುಂಬದ ಬೆನ್ನೆಲುಬಾಗಿದ್ದ. ಆದರೆ ಇಂದು ಕುಟುಂಬಕ್ಕೆ ಬೆನ್ನೆಲುಬಾಗಬೇಕಾದ ಯುವಕ ವೃದ್ಧ ತಾಯಿಯ ಆಸರೆಯಲ್ಲಿ ಬದುಕುವ ಪರಿಸ್ಥಿತಿ ಬಂದಿದೆ ಎಂದು ತಾಯಿ ಶಾಂತ ಕಣ್ಣೀರಾಕುತ್ತಾರೆ.

ಚಿಕಿತ್ಸೆಗೆ ಹಣವಿಲ್ಲ ! : ಲಾಕ್‍ಡೌನ್ ಹಿನ್ನೆಲೆ ತೋಟದಲ್ಲಿ ಕೆಲಸ ಕಡಿಮೆ. ಮಗನ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು, ಮಂಗಳೂರಿಗೆ ತೆರಳಬೇಕಾಗಿದೆ. ಬಾಡಿಗೆ ವಾಹನದಲ್ಲಿ ಮಂಗಳೂರಿಗೆ ತೆರಳಲು ಹಣವಿಲ್ಲ, ಇತ್ತ ಸ್ಥಳೀಯವಾಗಿ ಔಷಧಿ ತರಲು ಹಣವೂ ಇಲ್ಲ ಎಂದು ಶಾಂತ ಅಳಲು ತೋಡಿಕೊಂಡರು.

ಪಡಿತರ ಚೀಟಿ ಆಸರೆ : ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಶಾಂತ ಹಾಗೂ ಹಾಸಿಗೆ ಹಿಡಿದಿರುವ ಮಗ ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಈ ಸಂದÀರ್ಭದಲ್ಲಿ ಪಡಿತರ ಚೀಟಿಯಿಂದ ದೊರಕುವ ಹತ್ತು ಕೆ.ಜಿ ಅಕ್ಕಿ ಮಾತ್ರ ಇವರಿಗೆ ಆಸರೆಯಾಗಿದೆ. ಅಕ್ಕಿಯನ್ನು ಗಂಜಿ ಮಾಡಿ ಕುಡಿಯುತ್ತಿದ್ದೇವೆ. ಹಿಂದೆ ಸಕ್ಕರೆ, ಬೇಳೆ ಸಿಗುತ್ತಿತ್ತು. ಈಗ ಕೇವಲ ಅಕ್ಕಿ ಮಾತ್ರ ಸಿಗುತ್ತಿದೆ. ಈ ಅಕ್ಕಿಯಲ್ಲೇ ನಮ್ಮ ಬದುಕು ಸಾಗುತ್ತಿದೆ.ಎಂದು ಗದ್ಗದಿತರಾದರು.

ಚಿಕಿತ್ಸೆಗಾಗಿ ಕಣ್ಣಿರು ! : ಕಳೆದ ಹದಿನಾಲ್ಕು ವರ್ಷಗಳಿಂದ ಮಗ ಹಾಸಿಗೆಯನ್ನೇ ಪ್ರಪಂಚವಾಗಿಸಿದ್ದಾನೆ. ಮಗನ ಹಾರೈಕೆಯೇ ನನ್ನ ಜೀವನವಾಗಿದೆ. ಹೇಗಾದರು ಮಾಡಿ ಮಗನನ್ನು ಆರೋಗ್ಯವಂತನಾಗಿಸುವ ಪ್ರಯತ್ನ ನನ್ನದು. ಆದರೆ ಬಡತನ ನಮ್ಮನ್ನು ಕಾಡುತ್ತಿದೆ. ನನಗೆ ಬದುಕಲು ಪಡಿತರ ಅಕ್ಕಿ ಸಾಕು. ನಾನಿರುವವರೆಗೆ ಮಗನಿಗೆ ಒಂದೊತ್ತಿನ ಊಟ ನೀಡಲು ಸಾಧ್ಯ. ನಂತರ ಏನೂ ಎಂಬುದೇ ತಿಳಿದಿಲ್ಲ. ದಾನಿಗಳು ಹಾಗೂ ಸರಕಾರ ದಯವಿಟ್ಟು ನನ್ನ ಮಗನ ಚಿಕಿತ್ಸೆಗೆ ನೆರವಾಗಬೇಕೆಂದು ಕಣ್ಣೀರಾಕಿ ಬೇಡಿಕೊಂಡರು. - ವಾಸು ಆಚಾರ್ಯ