ಗೋಣಿಕೊಪ್ಪಲು, ಏ.30 : ಕಳೆದ 5 ದಿನಗಳಿಂದ ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ನಡಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಹುಲಿ ಕಾರ್ಯಾಚರಣೆ ಮುಂದುವರೆದಿದ್ದು ಹುಲಿಯ ಹೊಸ ಹೆಜ್ಜೆ ಗುರುತುಗಳು ಅಧಿಕಾರಿಗಳಿಗಾಗಲಿ, ಗ್ರಾಮದ ಜನರಿಗಾಗಲಿ ಲಭ್ಯವಾಗಿಲ್ಲ. ಆದರೂ ಸಿಬ್ಬಂದಿಗಳು ಸಾಕಾನೆಗಳ ಸಹಾಯ ಪಡೆದು ದೇವರಕಾಡುಗಳು,ಅರಣ್ಯ ಪ್ರದೇಶದಲ್ಲಿ ಕೂಬಿಂಗ್ ಮುಂದುವರಿಸಿದ್ದಾರೆ.ಜೇನು ನೊಣಗಳ ಕಡಿತದಿಂದ ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಗಳು, ಆನೆ ಮಾವುತರು ಹಾಗೂ ಅಧಿಕಾರಿಗಳು ಗುಣಮುಖರಾಗಿದ್ದು, ಹುಲಿಯ ಜಾಡು ಹಿಡಿಯಲು ಅಧಿಕಾರಿಗಳು ಇದೀಗ ಕ್ಯಾಮರಾ ಸಹಾಯ ಪಡೆಯುವ ನಿಟ್ಟಿನಲ್ಲಿ ಅಧಿಕ ಕ್ಯಾಮರಾಗಳನ್ನು ಅಯಾ ಕಟ್ಟಿನ ಸ್ಥಳಗಳಲ್ಲಿ ಅಳವಡಿಸಲು ನುರಿತ ತಾಂತ್ರಿಕ ಕೆಲಸಗಾರ ಸಹಾಯ ಪಡೆದಿದ್ದಾರೆ.

ಕಳೆದ ಹಲವು ದಿನಗಳಿಂದ ಸುತ್ತಲಿನ ಪ್ರದೇಶದಲ್ಲಿ ಹಸುಗಳ ಮೇಲೆ ಹುಲಿಯ ದಾಳಿ ಮುಂದುವರೆದಿದ್ದು, ಹುಲಿಯನ್ನು ಬೋನಿಗೆ ಕೆಡವಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸುತಿದ್ದಾರೆ.

ಆದರೆ ಹುಲಿಯು ತನ್ನ ಜಾಗವನ್ನು ಬದಲಿಸುತ್ತಿರುವ ಕಾರಣ ಅಧಿಕಾರಿಗಳ ಕಾರ್ಯಾಚರಣೆಗೆ ಬಾರಿ ತೊಡಕಾಗಿ ಪರಿಣಮಿಸಿದೆ. ಅರವಳಿಕೆ ತಜ್ಞ ಡಾ ಮುಜೀಬ್ ಹಾಗೂ ಸಿಬ್ಬಂದಿ ಹಿರಿಯ ಅಧಿಕಾರಿಗಳು ಹುಲಿಯ ಸೆರೆಗೆ ಪ್ರಯತ್ನ ಮುಂದುವರಿಸಿದ್ದಾರೆ. ಹುಲಿಯ ಸೆರೆಗಾಗಿ 5 ಸಾಕಾನೆಗಳು ಶ್ರಮಿಸುತ್ತಿವೆ. ವಿರಾಜಪೇಟೆಯ ಡಿಎಫ್ ಓ ಶಿವಶಂಕರ್ ಕಾರ್ಯಾಚರಣೆಯ ಮಾಹಿತಿ ಪಡೆಯುತ್ತಿದ್ದು ಎಸಿಎಫ್ ಶ್ರೀಪತಿ, ಆರ್‍ಎಫ್‍ಓ ಅರಮಣಮಾಡ ತೀರ್ಥ ಹಾಗೂ ಅಶೋಕ್, ರೆಹಮಾನ್, ಡಿಆರ್‍ಎಫ್‍ಓ ದಿವಾಕರ್ ಹಾಗೂ ಮಂಜುನಾಥ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.