ಕುಶಾಲನಗರ, ಏ 29 : ಮಳೆಗಾಲಕ್ಕೆ ಮುನ್ನ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿನದಿಯ ಹೂಳೆತ್ತುವ ಕಾಮಗಾರಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಕ್ಷೇತ್ರ ಶಾಸಕ ಎಂಪಿ ಅಪ್ಪಚ್ಚುರಂಜನ್ ಅವರ ನೇತೃತ್ವದಲ್ಲಿ ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ತ ವೇದಿಕೆ ಪ್ರಮುಖರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದ ಮಳೆಗಾಲದ ಅವಧಿಯಲ್ಲಿ ಕುಶಾಲನಗರದ ಬಹುತೇಕ ಬಡಾವಣೆ ಮನೆಗಳು ಜಲಾವೃತಗೊಂಡಿದ್ದು ಅಲ್ಲದೆ ಮಡಿಕೇರಿ ಕುಶಾಲನಗರ ಮೈಸೂರು ರಸ್ತೆ ಹೆದ್ದಾರಿ ಕೂಡ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಇದೀಗ ಈ ಘಟನೆ ಮರುಕಳಿಸಬಾರದು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಚಿವರ ಗಮನ ಸೆಳೆದರು

ಈಗಾಗಲೇ ಜಿಲ್ಲಾಧಿಕಾರಿಗಳು ಈ ಕಾಮಗಾರಿಗೆ ಅನುಮೋದನೆ ನೀಡಿದ್ದು ಕಾವೇರಿ ನೀರಾವರಿ ನಿಗಮದ ಮೂಲಕ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸಚಿವರು ಆದೇಶ ನೀಡಿದರು. ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ. ಚಂದ್ರಕಲಾ ಅವರುಗಳು ತಕ್ಷಣ ಕೆಲಸ ನಿರ್ವಹಿಸಿ ಮುಂದೆ ಸಂಭವಿಸ ಬಹುದಾದ ಅನಾಹುತವನ್ನು ತಪ್ಪಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಈ ಸಂದರ್ಭ ಪ್ರವಾಹ ಸಂತ್ರಸ್ತ ವೇದಿಕೆಯ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಎಂ.ಎಂ. ಚರಣ್, ತೋರೆರ ಉದಯಕುಮಾರ್, ಕೊಡಗನ ಹರ್ಷ ಇದ್ದರು.